ನಿಮ್ಮ ಐಫೋನ್ ಗಳಲ್ಲಿ ಪೆಗಾಸಸ್ ಮಾದರಿಯ ಸ್ಪೈವೇರ್ ನುಸುಳಿರಬಹುದು: ಭಾರತದಲ್ಲಿಯ ಕೆಲವು ಬಳಕೆದಾರರಿಗೆ ಆ್ಯಪಲ್ ಎಚ್ಚರಿಕೆ
PC : NDTV
ಹೊಸದಿಲ್ಲಿ: ಇಸ್ರೇಲ್ ನ ಎನ್ಎಸ್ಒ ಗ್ರೂಪ್ ನ ವಿವಾದಾತ್ಮಕ ಪೆಗಾಸಸ್ ಮಾಲ್ವೇರ್ ಸೇರಿದಂತೆ ಐಫೋನ್ ಗಳು ‘ಮರ್ಸಿನರಿ ಸ್ಪೈವೇರ್’ಗಳ ದಾಳಿಗೆ ಗುರಿಯಾಗಿರಬಹುದು ಎಂದು ಆ್ಯಪಲ್ ಭಾರತದಲ್ಲಿಯ ತನ್ನ ಕೆಲವು ಬಳಕೆದಾರರು ಸೇರಿದಂತೆ 92 ದೇಶಗಳ ಬಳಕೆದಾರರಿಗೆ ಹೊಸ ಸುತ್ತಿನ ಎಚ್ಚರಿಕೆ ಸೂಚನೆಗಳನ್ನು ರವಾನಿಸಿದೆ.
ಇತ್ತೀಚಿನ ದಾಳಿಗಾಗಿ ಆ್ಯಪಲ್ ಯಾರನ್ನೂ ಬೆಟ್ಟು ಮಾಡಿಲ್ಲ. ಕಳೆದ ಅಕ್ಟೋಬರ್ನಲ್ಲಿ ಅದು ಕಾಂಗ್ರೆಸ್ ನ ಶಶಿ ತರೂರ್, ಆಪ್ ನ ರಾಘವ ಛಡ್ಡಾರಿಂದ ಹಿಡಿದು ಟಿಎಂಸಿಯ ಮಹುವಾ ಮೊಯಿತ್ರಾವರೆಗೆ ಪ್ರತಿಪಕ್ಷ ನಾಯಕರಿಗೆ ಇಂತಹುದೇ ಸೂಚನೆಗಳನ್ನು ಹೊರಡಿಸಿ ಅವರ ಐಫೋನ್ಗಳಲ್ಲಿ ಸಂಭವನೀಯ ಸರಕಾರಿ ಪ್ರಾಯೋಜಿತ ಸ್ಪೈವೇರ್ ದಾಳಿಯ ಬಗ್ಗೆ ಎಚ್ಚರಿಕೆ ನೀಡಿತ್ತು.
ಸರಕಾರದಿಂದ ಒತ್ತಡದ ಬಳಿಕ ಕಂಪನಿಯು,ತನ್ನ ಎಚ್ಚರಿಕೆ ಸೂಚನೆಗಳಿಗೆ ಯಾವುದೇ ನಿರ್ದಿಷ್ಟ ಸರಕಾರಿ ಪ್ರಾಯೋಜಿತ ದಾಳಿಕೋರರನ್ನು ತಾನು ಬೆಟ್ಟು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಗುರುವಾರ ನಸುಕಿನ 12:30ರ ಸುಮಾರಿಗೆ ಭಾರತದಲ್ಲಿಯ ಪೀಡಿತ ಬಳಕೆದಾರರಿಗೆ ಬೆದರಿಕೆ ಅಧಿಸೂಚನೆ ಇಮೇಲ್ಗಳು ಬಂದಿವೆ. ಆ್ಯಪಲ್ ನಿಂದ ಎಷ್ಟು ಜನರಿಗೆ ಇಂತಹ ಇಮೇಲ್ ಗಳು ಬಂದಿವೆ ಎನ್ನುವುದು ಸ್ಪಷ್ಟಗೊಂಡಿಲ್ಲ. ಪೆಗಾಸಸ್ ಸ್ಪೈವೇರ್ ಅನ್ನು ಉಲ್ಲೇಖಿಸಿರುವ ಇಮೇಲ್ಗಳು,ಜಾಗತಿಕವಾಗಿ ಜನರನ್ನು ಗುರಿಯಾಗಿಸಿಕೊಳ್ಳಲು ಇಂತಹ ಸಾಧನಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿವೆ.
ಬಳಕೆದಾರರು ತಾವು ಸ್ವೀಕರಿಸುವ ಎಲ್ಲ ಲಿಂಕ್ಗಳ ಬಗ್ಗೆ ಜಾಗೃತರಾಗಿರಬೇಕು ಹಾಗೂ ಅನಪೇಕ್ಷಿತ ಮತ್ತು ಅಪರಿಚಿತ ರವಾನೆದಾರರಿಂದ ಯಾವುದೇ ಲಿಂಕ್ಗಳನ್ನು ಅಥವಾ ಲಗತ್ತುಗಳನ್ನು ತೆರೆಯಬಾರದು ಎಂದು ಆ್ಯಪಲ್ ತನ್ನ ಬಳಕೆದಾರರಿಗೆ ಸಲಹೆ ನೀಡಿದೆ.
ಆ್ಯಪಲ್ 2021ರಿಂದ ಎಚ್ಚರಿಕೆ ಸೂಚನೆಗಳನ್ನು ಕಳುಹಿಸಲು ಆರಂಭಿಸಿದ್ದು,ಆಗಿನಿಂದ 150 ದೇಶಗಳಲ್ಲಿಯ ಬಳಕೆದಾರರು ಅವುಗಳನ್ನು ಸ್ವೀಕರಿಸಿದ್ದಾರೆ. ಕಳೆದ ವರ್ಷ ಅದು ಸೂಚನೆಗಳನ್ನು ಕಳುಹಿಸಿದಾಗ ಐಫೋನ್ ಹೊಂದಿರುವ ಕನಿಷ್ಠ 20 ಭಾರತೀಯರು ಅವುಗಳನ್ನು ಸ್ವೀಕರಿಸಿದ್ದರು.