ದೇಶದಲ್ಲಿ ಸರ್ವಾಧಿಕಾರದ ವಿರುದ್ಧ ಜನರು ಹೋರಾಡಬೇಕಿದೆ : ಮನೀಷ್ ಸಿಸೋಡಿಯಾ
ಮನೀಷ್ ಸಿಸೋದಿಯಾ | PTI
ಹೊಸದಿಲ್ಲಿ : ಹಿರಿಯ ಆಪ್ ನಾಯಕ ಮನೀಷ್ ಸಿಸೋಡಿಯಾ ಅವರು ದೇಶದಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಡುವಂತೆ ಪಕ್ಷದ ಕಾರ್ಯಕರ್ತರು ಮತ್ತು ಜನತೆಗೆ ಶನಿವಾರ ಕರೆ ನೀಡಿದರು. ಸಿಸೋಡಿಯಾ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಶುಕ್ರವಾರ ಜೈಲಿನಿಂದ ಜಾಮೀನು ಬಿಡುಗಡೆಗೊಂಡಿದ್ದಾರೆ.
ಇಲ್ಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿಯನ್ನು ಗುರಿಯಾಗಿಸಿಕೊಂಡು,ಈ ಜನರು ಸಂವಿಧಾನಕ್ಕಿಂತ ಹೆಚ್ಚು ಪ್ರಬಲರಲ್ಲ. ನಾಯಕರನ್ನು ಜೈಲಿಗೆ ತಳ್ಳುವ ಜೊತೆಗೆ ನಾಗರಿಕರಿಗೂ ಕಿರುಕುಳ ನೀಡುತ್ತಿರುವ ಈ ಸರ್ವಾಧಿಕಾರದ ವಿರುದ್ಧ ಪ್ರತಿಯೊಬ್ಬರೂ ಹೋರಾಡಬೇಕಿದೆ ಎಂದು ಹೇಳಿದರು.
ತಾನು ಜೈಲಿನಲ್ಲಿದ್ದಾಗ ಜಾಮೀನು ಸಿಗುವ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ಬಿಜೆಪಿಗೆ ಹಣದ ದೇಣಿಗೆ ನೀಡಲಿಲ್ಲ ಎಂಬ ಏಕಮಾತ್ರ ಕಾರಣಕ್ಕೆ ಉದ್ಯಮಿಗಳನ್ನು ಜೈಲಿಗೆ ತಳ್ಳುತ್ತಿರುವುದನ್ನು ನೋಡಿ ತನಗೆ ನೋವಾಗಿತ್ತು ಎಂದರು.
ಅಬಕಾರಿ ನೀತಿ ಪ್ರಕರಣದಲ್ಲಿ ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುರಿತಂತೆ ಸಿಸೋದಿಯಾ,ಅವರು ದೇಶದಲ್ಲಿ ಪ್ರಾಮಾಣಿಕತೆಯ ಪ್ರತೀಕವಾಗಿದ್ದಾರೆ. ಒಳ್ಳೆಯ ಕೆಲಸಗಳನ್ನು ಮಾಡಿರುವ ಅವರ ಹೆಸರು ಕೆಡಿಸಲು ಷಡ್ಯಂತ್ರಗಳನ್ನು ರಚಿಸಲಾಗುತ್ತಿದೆ. ಪ್ರತಿಪಕ್ಷ ನಾಯಕರು ಸರ್ವಾಧಿಕಾರದ ವಿರುದ್ಧ ಒಂದಾದರೆ ಕೇಜ್ರಿವಾಲ್ 24 ಗಂಟೆಗಳಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು ಹೇಳಿದರು.