ನಾನು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಜನರು ಬಯಸುತ್ತಿದ್ದಾರೆ : ಏಕನಾಥ್ ಶಿಂದೆ
ಏಕನಾಥ್ ಶಿಂದೆ | PC : PTI
ಮುಂಬೈ: ಡಿಸೆಂಬರ್ 5ರಂದು ಮುಂಬೈನ ಆಝಾದ್ ಮೈದಾನದಲ್ಲಿ ನೂತನ ಮಹಾರಾಷ್ಟ್ರ ಸರಕಾರ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಬಿಜೆಪಿ ಪ್ರಕಟಿಸಿದ ಬೆನ್ನಿಗೇ, “ನಾನು ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿದ್ದರಿಂದ, ಜನರು ನಾನು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ” ಎಂದು ಉಸ್ತುವಾರಿ ಮುಖ್ಯಮಂತ್ರಿ ಹಾಗೂ ಶಿವಸೇನೆ ಅಧ್ಯಕ್ಷ ಏಕನಾಥ್ ಶಿಂದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಗೆದುಕೊಂಡಿರುವ ನಿರ್ಧಾರವನ್ನು ನಮ್ಮ ಪಕ್ಷ ಬೆಂಬಲಿಸಲಿದೆ ಎಂದು ಅವರು ಪುನರುಚ್ಚರಿಸಿದ್ದರೂ, ನನ್ನ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆಗಳನ್ನು ಎದುರಿಸಲಾಗಿತ್ತು ಎಂದೂ ಅವರು ಬಿಜೆಪಿ ಕೇಂದ್ರ ನಾಯಕತ್ವಕ್ಕೆ ನೆನಪಿಸಿದ್ದಾರೆ.
ಸತಾರಾ ಜಿಲ್ಲೆಯ ತಮ್ಮ ತವರು ಗ್ರಾಮ ಡಾರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂದೆ, “ನಾನು ಜನರ ಮುಖ್ಯಮಂತ್ರಿಯಾಗಿದ್ದೆ. ವಾಸ್ತವವಾಗಿ, ನಾನು ಮುಖ್ಯಮಂತ್ರಿಯಲ್ಲ, ಬದಲಿಗೆ ಸಾಮಾನ್ಯ ವ್ಯಕ್ತಿ ಎಂದೇ ಹೇಳುತ್ತಿದ್ದೆ. ಸಾಮಾನ್ಯ ವ್ಯಕ್ತಿಯಾಗಿ ಜನರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ನೋವನ್ನು ಅರ್ಥ ಮಾಡಿಕೊಂಡು, ಅವುಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೆ. ನಾನು ಸಾಮಾನ್ಯ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದರಿಂದ, ಜನರು ಸಹಜವಾಗಿಯೇ ನಾನು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ” ಎಂದು ತಾವು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ರಾಜ್ಯದ ಕೆಲವು ವರ್ಗಗಳು ಆಗ್ರಹಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಶಿವಸೇನೆ ಗೃಹ ಖಾತೆಯನ್ನು ಬಯಸುತ್ತಿದೆಯೆ, ನಿಮ್ಮ ಪುತ್ರ ಶ್ರೀಕಾಂತ್ ಶಿಂದೆ ಉಪ ಮುಖ್ಯಮಂತ್ರಿಯಾಗಲಿದ್ದಾರೆಯೆ ಎಂಬ ಪ್ರಶ್ನೆಗಳಿಗೆ, “ಅವೆಲ್ಲ ವಿಷಯಗಳು ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ” ಎಂದಷ್ಟೆ ಏಕನಾಥ್ ಶಿಂದೆ ಉತ್ತರಿಸಿದರು.