ಹುದ್ದೆಯಿಂದ ಇಳಿದಾಗ ಕತ್ತೆ ತಲೆಯಿಂದ ಕೋಡುಗಳು ಮಾಯವಾದಂತೆ ಹೋರ್ಡಿಂಗ್ಗಳಿಂದ ಫೋಟೋ ಕಣ್ಮರೆಯಾಗುತ್ತವೆ: ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್ (PTI)
ಭೋಪಾಲ್: ಒಬ್ಬ ವ್ಯಕ್ತಿ ಉನ್ನತ ಹುದ್ದೆಯಲ್ಲಿಲ್ಲದೇ ಇದ್ದಾಗ ಕತ್ತೆಯ ತಲೆಯಿಂದ ಕೋಡುಗಳು ಮಾಯವಾದಂತೆ ಹೋರ್ಡಿಂಗ್ಗಳಿಂದ ಫೋಟೋಗಳು ಕಣ್ಮರೆಯಾಗುತ್ತವೆ, ಎಂದು ಮಧ್ಯ ಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹೊರತಾಗಿಯೂ ಐದನೇ ಅವಧಿಗೆ ಸಿಎಂ ಆಗುವ ಅವಕಾಶ ಕಳೆದುಕೊಂಡಿರುವ ಚೌಹಾಣ್, ಈ ರೀತಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ರವಿವಾರ ಭೋಪಾಲ್ ನ ನೀಲ್ಬಡ್ ನಲ್ಲಿ ಆಯೋಜನೆಗೊಂಡಿದ್ದ ಬ್ರಹ್ಮಕುಮಾರಿ ಸಂಸ್ಥೆಯ ಸಮಾರಂಭದಲ್ಲಿ ಭಾಗವಹಿಸಿ ಚೌಹಾಣ್ ಮೇಲಿನಂತೆ ಹೇಳಿಕೆ ನೀಡಿದ್ದಾರೆ. ಸದ್ಯ ಆ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
“ಇತರರಿಗಾಗಿ ಶ್ರಮಿಸುವ ಗುರಿಯನ್ನು ನಾವು ಹೊಂದಿದಾಗ ಜೀವನದಲ್ಲಿ ಸಂತೋಷ ತುಂಬಿರುತ್ತದೆ. ನನ್ನಲ್ಲಿ ಈಗಲೂ ಸಮಯವಿಲ್ಲ. ಸದಾ ಕೆಲಸದಲ್ಲಿರುತ್ತೇನೆ. ರಾಜಕೀಯದಿಂದ ದೂರ ಕೆಲಸ ಮಾಡುವ ಅವಕಾಶ ದೊರೆಯುವುದು ಖುಷಿಯಾಗಿದೆ,” ಎಂದು ಅವರು ಹೇಳಿದರು.
“ದೇಶಕ್ಕಾಗಿ ಬದುಕುವ ಮೋದೀ ಜಿ ಅವರಂತಹ ಮುಖಂಡರಿದ್ದಾರೆ. ಆದರೆ ಬಣ್ಣಗಳನ್ನು ನೋಡುವವರೂ ಅನೇಕರಿದ್ದಾರೆ. ನೀವು ಸಿಎಂ ಆಗಿದ್ದರೆ, ಜನರು ಹೇಳುತ್ತಾರೆ ನಿಮ್ಮ ಕೈಕಾಲುಗಳು ತಾವರೆಯಂತಿದೆ. ಆದರೆ ನೀವು ಹುದ್ದೆಯಲ್ಲಿಲ್ಲದೇ ಇದ್ದಾಗ ಕತ್ತೆಯ ತಲೆಯಲ್ಲಿನ ಕೋಡುಗಳಂತೆ ಹೋರ್ಡಿಂಗ್ಗಳಿಂದ ನಿಮ್ಮ ಫೋಟೋಗಳು ಕಣ್ಮರೆಯಾಗುತ್ತವೆ,” ಎಂದು ಅವರು ಹೇಳಿದರು.
ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ, ಕೆಲವೊಮ್ಮೆ ಪಟ್ಟಾಭಿಷೇಕಕ್ಕಾಗಿ ಕಾಯುತ್ತಿರುವವರು ವನವಾಸದಲ್ಲಿ ಅಂತ್ಯಗೊಳ್ಳುತ್ತಾರೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಸ್ವಕ್ಷೇತ್ರ ಬುಧ್ನಿಯ ಶಹಗಂಜ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನುದ್ದೇಶಿಸಿ ಹೇಳಿದ್ದರು.