ಜೆಡಿಎಸ್-ಬಿಜೆಪಿ ಮೈತ್ರಿ: ದೇವೆಗೌಡರ ಹೇಳಿಕೆ ನಿರಾಕರಿಸಿದ ಪಿಣರಾಯಿ ವಿಜಯನ್
Photo: instagram/pinarayivijayan
ತಿರುವನಂತಪುರ : ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಮುಂದುವರಿಯಲು ಪಿಣರಾಯಿ ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಅವರ ಹೇಳಿಕೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದಾರೆ.
ಈ ಹೇಳಿಕೆ ಕುರಿತಂತೆ ದೇವೆಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಿಣರಾಯಿ ವಿಜಯನ್, ತಮ್ಮ ಸ್ವಂತ ರಾಜಕೀಯ ನಿಲುವನ್ನು ಸಮರ್ಥಿಸಿಕೊಳ್ಳುವ ದೇವೆಗೌಡರ ಇಂತಹ ಹೇಳಿಕೆ ತಪ್ಪು ಹಾಗೂ ಅಸಂಬದ್ಧ ಎಂದು ಹೇಳಿದ್ದಾರೆ.
ಶುಕ್ರವಾರ ನಡೆದ ಸಿಪಿಎಂ ಸೆಕ್ರೇಟರಿಯೇಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾವವಾಯಿತು. ಈ ಸಂದರ್ಭ ಪಿಣರಾಯಿ ವಿಜಯನ್ ಅವರು, ಅಲ್ಲಿ ದೇವೆಗೌಡ ಹೇಳಿದಂತೆ ನಾನು ಒಪ್ಪಿಕೊಂಡಿಲ್ಲ ಎಂದರು. ತಾನು ಇತ್ತೀಚೆಗೆ ದೇವೆಗೌಡರನ್ನು ಭೇಟಿ ಮಾಡಿಲ್ಲ ಹಾಗೂ ಮಾತುಕತೆ ನಡೆಸಿಲ್ಲ ಎಂದು ಅವರು ಪಕ್ಷದ ನಾಯಕರಿಗೆ ತಿಳಿಸಿದರು.
ದೇವೆಗೌಡ ಅವರು ಬಿಜೆಪಿಯೊಂದಿಗೆ ಕೈಜೋಡಿಸುತ್ತಿರುವುದು ಇದು ಮೊದಲನೇ ಬಾರಿ ಅಲ್ಲ. ಈ ಹಿಂದೆ 2006ರಲ್ಲಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ತನ್ನ ಪುತ್ರನಿಗೆ ಮುಖ್ಯಮಂತ್ರಿ ಹುದ್ದೆಗಾಗಿ ದೇವೆಗೌಡ ಅವರು ಬಿಜೆಪಿಯೊಂದಿಗೆ ಕೈಜೋಡಿಸಲು ಬಯಸಿದ್ದರು. ದೇವೆಗೌಡರ ಅವಕಾಶವಾದಿ ರಾಜಕೀಯ ನಿಲುವನ್ನು ವಿರೋದಿಸಿ ಈ ಹಿಂದೆ ಕೇರಳದ ಜೆಡಿಎಸ್ ನಾಯಕ ಸುರೇಂದ್ರ ಮೋಹನ್ ಪಕ್ಷ ತ್ಯಜಿಸಿದ್ದರು ಎಂದು ಪಿಣರಾಯಿ ವಿಜಯನ್ ನೆನಪಿಸಿದರು.