ಸ್ವರ್ಣಮಂದಿರದಲ್ಲಿ ಕುತ್ತಿಗೆಗೆ ಫಲಕ, ಕೈಯಲ್ಲಿ ಈಟಿ : ಗಾಲಿಕುರ್ಚಿಯಲ್ಲಿ ಕುಳಿತು ʼಧಾರ್ಮಿಕ ಶಿಕ್ಷೆʼಗೆ ಒಳಗಾದ ಸುಖ್ಬೀರ್ ಸಿಂಗ್ ಬಾದಲ್
ಸುಖ್ಬೀರ್ ಸಿಂಗ್ ಬಾದಲ್ | PC : PTI
ಹೊಸದಿಲ್ಲಿ: ಶಿರೋಮಣಿ ಅಕಾಲಿ ದಳದ (ಎಸ್ಎಡಿ) ನಾಯಕ ಸುಖ್ಬೀರ್ ಸಿಂಗ್ ಬಾದಲ್ ಮಂಗಳವಾರ ಪಂಜಾಬ್ ನ ಅಮೃತಸರದ ಗೋಲ್ಡನ್ ಟೆಂಪಲ್ ನ ಗೇಟ್ ಬಳಿ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡು ಕುತ್ತಿಗೆಗೆ ಫಲಕ ಮತ್ತು ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು ʼಧಾರ್ಮಿಕ ಶಿಕ್ಷೆʼಗೆ ಒಳಗಾಗಿರುವುದು ಕಂಡು ಬಂದಿದೆ.
ಸಿಖ್ ನಂಬಿಕೆಯಲ್ಲಿ 'ತಂಖಾ' ಎಂದು ಕರೆಯಲ್ಪಡುವ ಧಾರ್ಮಿಕ ಶಿಕ್ಷೆಯನ್ನು ಸುಖಬೀರ್ ಸಿಂಗ್ ಬಾದಲ್ ಮತ್ತು ಪಕ್ಷದ ಇತರ ನಾಯಕರಿಗೆ ಅಕಲ್ ತಖ್ತ್ ಸಾಹಿಬ್ ಸೋಮವಾರ ವಿಧಿಸಿದ್ದರು.
2007 ರಿಂದ 2017ರವರೆಗೆ ಪಂಜಾಬ್ ನ ಶಿರೋಮಣಿ ಅಕಾಲಿದಳ ಸರ್ಕಾರವು ಮಾಡಿದ "ತಪ್ಪುಗಳಿಗೆ" ಧಾರ್ಮಿಕ ಶಿಕ್ಷೆಯ ಭಾಗವಾಗಿ, ಅಕಾಲಿ ದಳದ ನಾಯಕ ಸುಖ್ ಬೀರ್ ಬಾದಲ್ ಗೆ ಅಮೃತಸರದ ಸ್ವರ್ಣಮಂದಿರದಲ್ಲಿ ಸೇವಾಕರ್ತರಾಗಿ ಪಾತ್ರೆ ತೊಳೆಯಬೇಕು ಹಾಗೂ ಪಾದರಕ್ಷೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಿಖ್ ಧಾರ್ಮಿಕ ಗುರುಗಳು ತಂಖಾ (ಧಾರ್ಮಿಕ ಶಿಕ್ಷೆ) ವಿಧಿಸಿದ್ದರು. ಸುಖ್ಬೀರ್ ಬಾದಲ್ ಮಾತ್ರವಲ್ಲದೆ ಇತರೆ ಕ್ಯಾಬಿನೆಟ್ ಸದಸ್ಯರಿಗೆ ಗೋಲ್ಡನ್ ಟೆಂಪಲ್ನಲ್ಲಿ ಶೌಚಾಲಯ ಹಾಗೂ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಲಾಗಿತ್ತು.