ಭಾರತ-ಚೀನಾ ನಡುವಿನ ಸ್ಪರ್ಧೆಯೆಂದೂ ಸಂಘರ್ಷಕ್ಕೆ ತಿರುಗಬಾರದು: ಪ್ರಧಾನಿ ಮೋದಿ

ನರೇಂದ್ರ ಮೋದಿ | PTI
ಹೊಸದಿಲ್ಲಿ: 21ನೆಯ ಶತಮಾನವು ಏಶ್ಯ ಖಂಡದ ಶತಮಾನವಾಗಿರುವುದಿಂದ, ಭಾರತ ಮತ್ತು ಚೀನಾ ದೇಶಳು ಆರೋಗ್ಯಕರ ಮತ್ತು ಸಹಜವಾಗಿ ಸ್ಪರ್ಧಿಸುವುದನ್ನು ನಾವು ಬಯಸುತ್ತೇವೆ. ಸ್ಪರ್ಧೆ ಕೆಟ್ಟ ಸಂಗತಿಯಲ್ಲ. ಆದರೆ, ಅದೆಂದೂ ಸಂಘರ್ಷಕ್ಕೆ ತಿರುಗಬಾರದು” ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಪ್ರಸಾರವಾದ ಅಮೆರಿಕ ಕಂಪ್ಯೂಟರ್ ವಿಜ್ಞಾನಿ ಹಾಗೂ ಪಾಡ್ ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ರೊಂದಿಗಿನ ಪಾಡ್ ಕಾಸ್ಟ್ ನಲ್ಲಿ ಭಾರತ ಮತ್ತು ಚೀನಾ ಬಾಂಧವ್ಯದ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಚೀನಾದೊಂದಿಗಿನ ಈ ಹಿಂದಿನ ಸಂಘರ್ಷದ ಹೊರತಾಗಿಯೂ, ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮಾತುಕತೆ ನಡೆಯಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಭಿನ್ನಾಭಿಪ್ರಾಯಗಳು ಸಹಜವಾಗಿದ್ದರೂ, ಎರಡು ರಾಷ್ಟ್ರಗಳ ಹಿತಾಸಕ್ತಿಗಾಗಿ ಹಾಗೂ ಜಾಗತಿಕ ಸ್ಥಿರತೆಗಾಗಿ ಬಲಿಷ್ಠ ಸಹಕಾರ ನೀತಿಯನ್ನು ಅನುಸರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಭಾರತ ಹಾಗೂ ಚೀನಾ ನಡುವಿನ ಸಹಕಾರದಿಂದ ಕೇವಲ ಉಭಯ ದೇಶಗಳಿಗೆ ಮಾತ್ರ ಲಾಭವಾಗುವುದಿಲ್ಲ, ಬದಲಿಗೆ ಜಾಗತಿಕ ಸ್ಥಿರತೆ ಹಾಗೂ ಸಮೃದ್ಧಿಗೆ ಇದು ಬಹು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
2020ರಲ್ಲಿ ನೈಜ ನಿಯಂತ್ರಣ ರೇಖೆಯ ಬಳಿ ನಡೆದಿದ್ದ ಘರ್ಷಣೆಯ ನಂತರ, ಭಾರತ ಮತ್ತು ಚೀನಾಗಳೆರಡೂ ಗಡಿಗಳಲ್ಲಿ ಘರ್ಷಣೆಗೂ ಮುಂಚಿನ ಸ್ಥಿತಿಯನ್ನು ಮರುಸ್ಥಾಪಿಸಲು ಕಾರ್ಯಪ್ರವೃತ್ತವಾಗಿವೆ ಎಂದು ಅವರು ತಿಳಿಸಿದ್ದಾರೆ. 1975ರ ನಂತರ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದಿದ್ದ ಈ ಘರ್ಷಣೆಯಲ್ಲಿ ಉಭಯ ದೇಶಗಳ ಕೆಲ ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರು.