ಟ್ರಂಪ್ ಪ್ರಮಾಣ ವಚನಕ್ಕೆ ಪ್ರಧಾನಿ ಮೋದಿಯನ್ನು ಆಹ್ವಾನಿಸುವಂತೆ ಕೋರಲು ಜೈಶಂಕರ್ ಅಮೆರಿಕ ಭೇಟಿ ನೀಡಿದ್ದರು: ರಾಹುಲ್ ಗಾಂಧಿ ಗಂಭೀರ ಆರೋಪ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸುವಂತೆ ಕೋರಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಅಮೆರಿಕಗೆ ಭೇಟಿ ನೀಡಿದ್ದರು ಎಂದು ಇಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರಿಂದ, ವಿರೋಧ ಪಕ್ಷಗಳು ಹಾಗೂ ಖಜಾಂಚಿ ಪೀಠದ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಸದನದಲ್ಲಿ ಉಪಸ್ಥಿತರಿದ್ದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಅರೋಪವನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ಬಲವಾಗಿ ಆಕ್ಷೇಪಿಸಿದ ಬಿಜೆಪಿ ಸಂಸದರು, ದೇಶದ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಅವರು ಇಂತಹ ಆಧಾರರಹಿತ ಆರೋಪ ಮಾಡುವಂತಿಲ್ಲ ಎಂದು ಮುಗಿಬಿದ್ದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸಿ ಮಾತನಾಡಿದ ರಾಹುಲ್ ಗಾಂಧಿ, “ಕಳೆದ ಬಾರಿ, ಅದಕ್ಕೂ ಹಿಂದಿನ ಬಾರಿ ಹಾಗೂ ಅದಕ್ಕೂ ಹಿಂದಿನ ಬಾರಿ ರಾಷ್ಟ್ರಪತಿಗಳು ಇಂತಹುದೇ ಭಾಷಣ ಮಾಡಿರುವುದನ್ನು ನಾನು ಸಾಕಷ್ಟು ಕೇಳಿರುವುದರಿಂದ, ಇದು ಸರಕಾರ ಮಾಡಿರುವ ಅದೇ ಸ್ವಚ್ಛತೆಯ ಪಟ್ಟಿಯಾಗಿದೆ” ಎಂದು ವ್ಯಂಗ್ಯವಾಡಿದರು.
“ನರೇಂದ್ರ ಮೋದಿ ಸರಕಾರದ ಮೇಕ್ ಇನ್ ಇಂಡಿಯಾ ಉಪಕ್ರಮದ ಹೊರತಾಗಿಯೂ, 2014ರಲ್ಲಿ ಶೇ. 15.3ರಷ್ಟಿದ್ದ ಭಾರತದ ಜಿಡಿಪಿಯು ಇಂದು ಶೇ. 12.6ಕ್ಕೆ ಕುಸಿದಿದೆ. ನಾವು ಈ ಕುರಿತು ಪ್ರಧಾನಿಯನ್ನು ದೂಷಿಸುತ್ತಿಲ್ಲ. ಅವರೇನೂ ಪ್ರಯತ್ನ ಪಟ್ಟಿಲ್ಲ ಎಂದು ಹೇಳುವುದು ನ್ಯಾಯಯುತವಾಗುವುದಿಲ್ಲ. ಮೇಕ್ ಇನ್ ಇಂಡಿಯಾ ಉತ್ತಮ ಪರಿಕಲ್ಪನೆಯಾದರೂ, ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ” ಎಂದು ಅವರು ಹೇಳಿದರು.
“ಸಾಂಸ್ಥಿಕ ಉತ್ಪಾದನೆಯಲ್ಲಿ ಭಾರತದ ದಾಖಲೆಯು ನಿರಾಶಾದಾಯಕವಾಗಿದೆ. ನಾವು ಸಾಂಸ್ಥಿಕ ಉತ್ಪಾದನೆಯನ್ನು ಚೀನೀಯರಿಗೆ ಹಸ್ತಾಂತರಿಸಿದ್ದೇವೆ. ನಾವು ಮೊಬೈಲ್ ಫೋನ್ ಬಳಸಿದಾಗ, ನಾವು ಶರ್ಟ್ ಅಥವಾ ಪಾದರಕ್ಷೆಗಳನ್ನು ಧರಿಸಿದಾಗ, ನಾವು ಚೀನಾಗೆ ತೆರಿಗೆಯನ್ನು ಪಾವತಿಸುತ್ತೇವೆ. ನಾವು ಉತ್ಪಾದನೆಯತ್ತ ಗಮನ ನೀಡದಿದ್ದರೆ ಹಾಗೂ ಬಳಕೆಯತ್ತ ಮಾತ್ರ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಿದರೆ, ನಿರುದ್ಯೋಗದ ಕಾರಣಕ್ಕೆ ನಾವು ತೀವ್ರ ಕೊರತೆ, ಅಸಮಾನತೆಯ ಹೆಚ್ಚಳ ಹಾಗೂ ಸಾಮಾಜಿಕ ಸಮಸ್ಯೆಗೆ ಗುರಿಯಾಗಲಿದ್ದೇವೆ” ಎಂದು ಅವರು ಎಚ್ಚರಿಸಿದರು.
ಚೀನಾ ಸಗಟು ಉತ್ಪಾದನಾ ದತ್ತಾಂಶಗಳನ್ನು ನಿಯಂತ್ರಿಸಿದರೆ, ಅಮೆರಿಕ ಬಳಕೆಯ ದತ್ತಾಂಶವನ್ನು ನಿಯಂತ್ರಿಸುತ್ತದೆ. ಹೀಗಾಗಿ ಭಾರತವೇನಾದರೂ ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಬೇಕಿದ್ದರೆ, ಅದಕ್ಕೆ ಬಲ ನೀಡುವಂತೆ ಯಾವ ದತ್ತಾಂಶಗಳು ಅದರ ಬಳಿಯಿವೆ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಇಂದಿನ ಉತ್ತರವೇನೆಂದರೆ, ಭಾರತದ ಬಳಿ ಉತ್ಪಾದನಾ ದತ್ತಾಂಶವಾಗಲಿ ಅಥವಾ ಬಳಕೆಯ ದತ್ತಾಂಶವಾಗಲಿ ಎರಡೂ ಇಲ್ಲ ಎಂಬುದಾಗಿದೆ” ಎಂದು ಹೇಳಿದ ರಾಹುಲ್ ಗಾಂಧಿ, ಉತ್ಪಾದನಾ ಜಾಲವನ್ನು ನಿರ್ಮಿಸಬೇಕಾದ ಅಗತ್ಯದ ಕುರಿತು ಒತ್ತಿ ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅಮೆರಿಕ ಅಧ್ಯಅಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಉಲ್ಲೇಖಿಸಿದರು. “ನಾವು ಅಮೆರಿಕದ ಕುರಿತು ಮಾತನಾಡುವುದಾದರೆ, ನಮ್ಮ ಪ್ರಧಾನಿಗೆ ಆಹ್ವಾನ ಪಡೆಯಲು ನಾವು ನಮ್ಮ ವಿದೇಶಾಂಗ ಸಚಿವರನ್ನು ಮೂರ್ನಾಲ್ಕು ಬಾರಿ ಅಮೆರಿಕಗೆ ಕಳಿಸಬೇಕಿರಲಿಲ್ಲ. ಯಾಕೆಂದರೆ, ನಮ್ಮ ಬಳಿ ಉತ್ಪಾದನಾ ವ್ಯವಸ್ಥೆ ಇದ್ದಿದ್ದರೆ ಹಾಗೂ ನಾವು ತಂತ್ರಜ್ಞಾನದ ದಿಕ್ಕಿನಲ್ಲಿ ಕೆಲಸ ಮಾಡಿದ್ದಿದ್ದರೆ, ಅಮೆರಿಕದ ಅಧ್ಯಕ್ಷರೇ ಇಲ್ಲಿಗೆ ಬಂದು ಪ್ರಧಾನಿಗೆ ಆಹ್ವಾನ ನೀಡಿರುತ್ತಿದ್ದರು” ಎಂದು ಛೇಡಿಸಿದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಯ ವಿರುದ್ಧ ಖಜಾಂಚಿ ಪೀಠದಿಂದ ಬಲವಾದ ಪ್ರತಿಭಟನೆ ವ್ಯಕ್ತವಾಯಿತು. “ವಿಪಕ್ಷ ನಾಯಕರು ಇಂತಹ ಗಂಭೀರ, ಆಧಾರರಹಿತ ಹೇಳಿಕೆಗಳನ್ನು ನೀಡಬಾರದು. ಇದು ಎರಡು ದೇಶಗಳ ನಡುವಿನ ಸಂಬಂಧದ ವಿಚಾರವಾಗಿದೆ. ಅವರು ನಮ್ಮ ಪ್ರಧಾನಿಗೆ ಆಹ್ವಾನದ ಕುರಿತು ಪರಿಶೀಲಿಸಿರದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಅದಕ್ಕೆ ಹೊಣೆಗಾರರಾಗಬೇಕಾಗುತ್ತದೆ. ಒಂದು ವೇಳೆ ವಿಪಕ್ಷ ನಾಯಕರ ಬಳಿ ಮಾಹಿತಿ ಇದ್ದರೆ, ವಿದೇಶಾಂಗ ಸಚಿವರು ಈ ಉದ್ದೇಶಕ್ಕಾಗಿ ಅಮೆರಿಕಗೆ ಭೇಟಿ ನೀಡಿದ್ದರು ಎಂದು ತಮಗೆ ಯಾರು ಹೇಳಿದರು ಎಂಬುದುನ್ನು ಸದನಕ್ಕೆ ತಿಳಿಸಬೇಕು” ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಗ್ರಹಿಸಿದರು.
“ನಿಮ್ಮನ್ನು ಘಾಸಿಗೊಳಿಸಿದ ಪ್ರಶ್ನೆಯ ಬಗ್ಗೆ ನಾನು ವಿಷಾದಿಸುತ್ತೇನೆ. ನಾನು ನಿಮ್ಮ ಶಾಂತಚಿತ್ತತೆಯನ್ನು ಕದಡಿದ್ದಕ್ಕೆ ಕ್ಷಮೆ ಕೋರುತ್ತೇನೆ. ನಾನು ವಿಷಾದಿಸುತ್ತೇನೆ” ಎಂದು ರಾಹುಲ್ ಗಾಂಧಿ ತಕ್ಷಣವೇ ಪ್ರತಿಕ್ರಿಯಿಸಿದರು. ಅದಕ್ಕೆ ತಿರುಗೇಟು ನೀಡಿದ ಕಿರಣ್ ರಿಜಿಜು, “ಸದನಕ್ಕೆ ಸುಳ್ಳು ಹೇಳಿದ್ದಕ್ಕೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು. ವಿಪಕ್ಷ ನಾಯಕರು ಗಂಭೀರವಾಗಿರಬೇಕು” ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ಸದನದಲ್ಲಿ ನೀಡಿದ ಹೇಳಿಕೆಯ ಬೆನ್ನಿಗೇ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, “ರಾಜಕೀಯ ಉದ್ದೇಶಗಳಿಗಾಗಿ ಸುಳ್ಳನ್ನು ಉದ್ದೇಶಪೂರ್ವಕವಾಗಿ ಹೇಳಿದಂತಿದೆ. ಆದರೆ, ಅವರು ವಿದೇಶಗಳಲ್ಲಿ ದೇಶಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ” ಎಂದು ಎಕ್ಸ್ ಪೋಸ್ಟ್ ನಲ್ಲಿ ಕಿಡಿ ಕಾರಿದ್ದಾರೆ.