ಪ್ರಧಾನಿ ಮೋದಿ ತನ್ನ ಸ್ವಂತ ವೈಫಲ್ಯಗಳಿಂದ ದೇಶದ ಗಮನವನ್ನು ಬೇರೆಡೆ ಸೆಳೆಯಲು ನೆಹರೂರನ್ನು ಪ್ರಸ್ತಾವಿಸುತ್ತಿದ್ದಾರೆ: ಕಾಂಗ್ರೆಸ್ ತಿರುಗೇಟು
ಜೈರಾಮ ರಮೇಶ್ | PC : ANI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ರವಿವಾರ ತಿರುಗೇಟು ನೀಡಿರುವ ಕಾಂಗ್ರೆಸ್,ಜವಾಹರಲಾಲ ನೆಹರೂ ಅವರ ಮಾನಹಾನಿ ಮತ್ತು ಕನಿಷ್ಠ ಪ್ರಜಾಪ್ರಭುತ್ವದ ಆಡಳಿತ ಅವರ ಮಾದರಿಯಾಗಿದೆ ಎಂದು ಆರೋಪಿಸಿದೆ.
ಮೋದಿಯವರಿಗೆ ನೆಹರು ಗೀಳು ಹಿಡಿದಿದೆ,ತನ್ನ ಸ್ವಂತ ವೈಫಲ್ಯಗಳಿಂದ ಮತ್ತು ತಾನು ಸಂಪೂರ್ಣ ಮೌನ ವಹಿಸಿರುವ ಪ್ರಚಲಿತ ಸವಾಲುಗಳಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಅವರು ನೆಹರೂರನ್ನು ಪ್ರಸ್ತಾವಿಸುತ್ತಿರುತ್ತಾರೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ್ ಹೇಳಿದರು.
ಶನಿವಾರ‘ ಭಾರತದ ಸಂವಿಧಾನದ 75 ವರ್ಷಗಳ ವೈಭವಯುತ ಪಯಣ’ ಕುರಿತು ಸಂಸತ್ತಿನಲ್ಲಿ ಚರ್ಚೆ ಸಂದರ್ಭದಲ್ಲಿ ಮೋದಿಯವರು ಕಾಂಗ್ರೆಸ್ ಪಕ್ಷದ ವಿರುದ್ಧ ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಮೇಶ್ ಅವರ ಈ ಹೇಳಿಕೆ ಹೊರಬಿದ್ದಿದೆ.
‘ದೇವರು ಅಸ್ತಿತ್ವದಲ್ಲಿ ಇಲ್ಲದಿದ್ದರೆ ದೇವರನ್ನು ಆವಿಷ್ಕರಿಸುವುದು ಅಗತ್ಯವಾಗುತ್ತದೆ ಎಂದು ಮೊದಲ ಬಾರಿಗೆ ಹೇಳಿದ್ದು ಖ್ಯಾತ ಫ್ರೆಂಚ್ ತತ್ವಜ್ಞಾನಿ ವೋಲ್ಟೇರ್. ನಮ್ಮ ಸ್ವಯಂ ಅಭಿಷಿಕ್ತ ದೈವತ್ವಕ್ಕೆ ನೆಹರು ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅವರನ್ನು ಆವಿಷ್ಕರಿಸುವುದು ಅಗತ್ಯವಾಗುತ್ತಿತ್ತು’ ಎಂದು ಕುಟುಕಿದ ರಮೇಶ,‘ನೆಹರು ಬಗ್ಗೆ ಗೀಳು ಹೊಂದಿರುವ ನಮ್ಮ ಪ್ರಧಾನಿಯವರು ಅವರಿಲ್ಲದೆ ಏನು ಮಾಡುತ್ತಾರೆ? ತನ್ನ ಸ್ವಂತ ವೈಫಲ್ಯಗಳಿಂದ ಮತ್ತು ತಾನು ಸಂಪೂರ್ಣವಾಗಿ ಮೌನವನ್ನು ವಹಿಸಿರುವ ಪ್ರಚಲಿತ ಸವಾಲುಗಳಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಅವರಿಗೆ ನೆಹರು ಅಗತ್ಯವಾಗಿದ್ದಾರೆ. ಮೇ 2014ಕ್ಕೆ ಮೊದಲಿನ ದೇಶದ ಹಲವಾರು ಸಾಧನೆಗಳನ್ನು ನಿರಾಕರಿಸಲೂ ಅವರಿಗೆ ನೆಹರುರ ಅಗತ್ಯವಿದೆ’ ಎಂದು ಹೇಳಿದರು.