ಚುನಾವಣೆಗಳು ತನ್ನ ಕೈಗಳಿಂದ ತಪ್ಪಿ ಹೋಗಿರುವುದು ಪ್ರಧಾನಿ ಮೋದಿಯವರಿಗೆ ಗೊತ್ತಾಗಿದೆ: ರಾಹುಲ್ ಗಾಂಧಿ
"ದೇಶದ ಸಂಪತ್ತನ್ನು ಬಿಲಿಯಾಧೀಶರ ಜೇಬುಗಳಿಗೆ ಸೇರಿಸುವುದು ಮೋದಿ ಗ್ಯಾರಂಟಿ"
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ತನ್ನ ಪಕ್ಷದ ಗ್ಯಾರಂಟಿಗಳು ಮತ್ತು ‘ಮೋದಿ ಕಿ ಗ್ಯಾರಂಟಿ ’ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿದೆ ಎಂದು ಗುರುವಾರ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಚುನಾವಣೆಗಳು ತನ್ನ ಕೈಗಳಿಂದ ತಪ್ಪಿ ಹೋಗಿವೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ರಾಹುಲ್, ‘ಭಾರತೀಯರ ಸರಕಾರ’ವು ಕಾಂಗ್ರೆಸ್ನ ಗ್ಯಾರಂಟಿಯಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ನೀಡಿರುವ ಕೆಲವು ಭರವಸೆಗಳನ್ನು ಪಟ್ಟಿ ಮಾಡಿರುವ ಅವರು,ಮಹಿಳೆಯರು ಮಾಸಿಕ 8,500 ರೂ.ಗಳನ್ನು ಪಡೆಯಲಿದ್ದಾರೆ. ಯುವಜನರು ವಾರ್ಷಿಕ ಒಂದು ಲ.ರೂ.ಗಳ ವೇತನದ ಉದ್ಯೋಗ ಪಡೆಯಲಿದ್ದಾರೆ. 30 ಲಕ್ಷ ಹುದ್ದೆಗಳಿಗೆ ನೇಮಕಾತಿಗಳನ್ನು ನಡೆಸಲಾಗುವುದು ಮತ್ತು ರೈತರಿಗೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
‘ಅದಾನಿ ಸರಕಾರ’ವು ಮೋದಿ ಗ್ಯಾರಂಟಿಯಾಗಿದೆ. ದೇಶದ ಸಂಪತ್ತನ್ನು ಬಿಲಿಯಾಧೀಶರ ಜೇಬುಗಳಿಗೆ ಸೇರಿಸುವುದು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಮುಗಿಸುವುದು,ಸುಲಿಗೆ ದಂಧೆ ಮೂಲಕ ದೇಣಿಗೆ ವ್ಯವಹಾರ,ರೈತರಿಗೆ ಆರ್ಥಿಕ ಮುಗ್ಗಟ್ಟು;ಇವು ಮೋದಿ ಗ್ಯಾರಂಟಿಗಳಾಗಿವೆ. ವ್ಯತ್ಯಾಸವು ಸ್ಪಷ್ಟವಾಗಿದೆ’ ಎಂದು ರಾಹುಲ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಭಾರತದಲ್ಲಿ ಕೋಟ್ಯಂತರ ಮಿಲಿಯಾಧೀಶರನ್ನು ಸೃಷ್ಟಿಸಲಿದೆ ಮತ್ತು ಚುನಾವಣೆಗಳು ತನ್ನ ಕೈಗಳಿಂದ ಜಾರಿವೆ ಎನ್ನುವುದು ಮೋದಿಯವರಿಗೆ ಗೊತ್ತಾಗಿದೆ ಎಂದೂ ರಾಹುಲ್ ಹೇಳಿದ್ದಾರೆ.
ಬುಧವಾರ ಅಮರಾವತಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್,10 ವರ್ಷಗಳ ಮೋದಿ ಸರಕಾರದ ಅವಧಿಯಲ್ಲಿ 16 ಲ.ಕೋ.ರೂ.ಗಳ ಸಾಲಗಳನ್ನು ಮನ್ನಾ ಮಾಡಲಾಗಿದ್ದು,ಕೇವಲ 22-25 ಜನರು ಬಿಲಿಯಾಧೀಶರಾಗಿದ್ದಾರೆ. ಆದರೆ ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಅದು ಕೋಟ್ಯಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಿದೆ ಎಂದು ಹೇಳಿದ್ದರು.
ಸಂವಿಧಾನವನ್ನು ಬದಲಿಸಲು ಬಿಜೆಪಿ ಬಯಸಿದ್ದು,ಜಗತ್ತಿನ ಯಾವ ಶಕ್ತಿಯಿಂದಲೂ ಭಾರತದ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದರು.