ಝೆಲೆನ್ಸ್ಕಿ, ಮ್ಯಾಕ್ರೋನ್, ಸುನಕ್ ಜತೆ ಪ್ರಧಾನಿ ಮೋದಿ ಸಮಾಲೋಚನೆ
ನರೇಂದ್ರ ಮೋದಿ , ರಿಷಿ ಸುನಕ್ | PC : PTI
ರೋಮ್: ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಆಹ್ವಾನಿತ ರಾಷ್ಟ್ರದ ಪ್ರತಿನಿಧಿಯಾಗಿ ಪಾಲ್ಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉಕ್ರೇನ್ ಅಧ್ಯಕ್ಷ ವ್ಲೊದಿಮಿರ್ ಝೆಲೆನ್ಸ್ಕಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿರುವುದಾಗಿ ವರದಿಯಾಗಿದೆ.
ಉಕ್ರೇನ್ ಅಧ್ಯಕ್ಷರ ಜತೆ ಫಲಪ್ರದ ಮಾತುಕತೆ ನಡೆದಿದೆ. ಈ ಸಂದರ್ಭ ರಶ್ಯ-ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸಲು ರಾಜತಾಂತ್ರಿಕ ಮಾತುಕತೆಯ ವಿಧಾನವೇ ಸೂಕ್ತ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಲಾಗಿದೆ. ಉಕ್ರೇನ್ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ ಉತ್ಸುಕವಾಗಿದೆ ಎಂದು ಮೋದಿ `ಎಕ್ಸ್' ಮಾಡಿದ್ದಾರೆ. ಪ್ರಧಾನಿ ಜತೆ ದ್ವಿಪಕ್ಷೀಯ ಸಂಬಂಧ ಮತ್ತು ವ್ಯಾಪಾರದ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ನಡೆಸಿದ್ದು ಕೃಷಿ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ ವಿನಿಮಯದ ಬಗ್ಗೆ ಗಮನ ಹರಿಸಲು ನಿರ್ಧರಿಸಲಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷರ ಜತೆಗಿನ ಸಭೆಯಲ್ಲಿ ರಕ್ಷಣೆ, ಪರಮಾಣು, ಬಾಹ್ಯಾಕಾಶ, ಶಿಕ್ಷಣ, ಪರಿಸರ , ಡಿಜಿಟಲ್ ಮೂಲಸೌಕರ್ಯ, ಪ್ರಮುಖ ತಂತ್ರಜ್ಞಾನ, ಸಂಸ್ಕøತಿ ಇತ್ಯಾದಿ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಇನ್ನಷ್ಟು ಸದೃಢಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತದ ನಿಯೋಗವನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಬಳಿಕ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಜತೆಗಿನ ಸಭೆಯಲ್ಲಿ ದ್ವಿಪಕ್ಷೀಯ ಸಂಬಂಧ ಮತ್ತು ಸಮಾನ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿ ಹೇಳಿದೆ.