ಅಪರೂಪದ ಕ್ಷಣ ; ಖತರ್ ಅಮೀರ್ ಅವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ತೆರಳಿದ ಪ್ರಧಾನಿ ಮೋದಿ!

ಹೊಸದಿಲ್ಲಿ: ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಸಂಜೆ ದಿಲ್ಲಿಗೆ ಆಗಮಿಸಿದ ಖತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಬರಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಮಾನ ನಿಲ್ದಾಣಕ್ಕೆ ತೆರಳಿ ಅಪರೂಪದ ಆತಿಥ್ಯ ವಹಿಸಿದರು.
ಖತರ್ ಅಮೀರ್ ಅವರು ಮಂಗಳವಾರ ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಖತರ್ ಅಮೀರ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಇದು ಖತರ್ ಅಮೀರ್ ಅವರ ಎರಡನೇ ಭೇಟಿಯಾಗಿದೆ. ಅವರು ಈ ಹಿಂದೆ ಮಾರ್ಚ್ 2015 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ತಿಳಿಸಿದೆ.
ಭಾರತ ಮತ್ತು ಖತರ್ ಆಳವಾದ ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಸೇರಿದಂತೆ ಎರಡೂ ದೇಶಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತಲೇ ಇವೆ.
Next Story