ಜೂನ್ 30 ರಿಂದ ಮತ್ತೆ ಮನ್ ಕಿ ಬಾತ್: ಹೊಸ ಯೋಚನೆಗಳಿಗೆ ಮೋದಿ ಆಹ್ವಾನ
Source: PTI
ಹೊಸದಿಲ್ಲಿ: ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿಯವರು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮವನ್ನು ಈ ತಿಂಗಳ 30 ರಿಂದ ಪುನರಾರಂಭಿಸಲಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಈ ಕಾರ್ಯಕ್ರಮ ಕೊನೆಗೊಳಿಸುವ ಮುನ್ನ ಅವರು ಹೊಸ ಅವಧಿಯಲ್ಲಿ ಮುಂದುವರಿಸುವ ಭರವಸೆ ನೀಡಿದ್ದರು.
ಈ ಮಾಸಿಕ ರೇಡಿಯೊ ಕಾರ್ಯಕ್ರಮಕ್ಕೆ ಜನರಿಂದ ಅವರು ಹೊಸ ಯೋಚನೆಗಳು ಮತ್ತು ವಿಷಯಗಳನ್ನು ಆಹ್ವಾನಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮೋದಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
"ಚುನಾವಣೆಯ ಕಾರಣದಿಂದ ಕೆಲ ತಿಂಗಳ ವಿರಾಮದ ಬಳಿಕ ಮನ್ ಕಿ ಬಾತ್ ಮತ್ತೆ ಬರುತ್ತಿದೆ. ಈ ಮಾಸಿಕ ಕಾರ್ಯಕ್ರಮ ಭಾನುವಾರ, ಜೂನ್ 30ರಂದು ಪ್ರಸಾರವಾಗಲಿದೆ" ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. "ಇದಕ್ಕೆ ನಿಮ್ಮ ಹೊಸ ಯೋಚನೆಗಳನ್ನು, ವಿಷಯಗಳನ್ನು ಆಹ್ವಾನಿಸುತ್ತಿದ್ದೇನೆ. ನನ್ನ ಮೈಗೋವ್ ಮುಕ್ತ ಫೋರಂ, ನಮೊ ಆ್ಯಪ್ಗೆ ನಿಮ್ಮ ಯೋಚನೆಗಳನ್ನು ಕಳುಹಿಸಿ ಅಥವಾ 1800 117800 ನಂಬರ್ಗೆ ನಿಮ್ಮ ಧ್ವನಿ ಸಂದೇಶ ಕಳುಹಿಸಿ ಎಂದು ಮೋದಿ ಕೋರಿದ್ದಾರೆ.
ಮೋದಿಯವರ ಕೊನೆಯ ಮನ್ ಕಿ ಬಾತ್ 2024ರ ಫೆಬ್ರವರಿ 25ಕ್ಕೆ ಪ್ರಸಾರವಾಗಿತ್ತು. ತಮ್ಮ 110ನೇ ಕಾರ್ಯಕ್ರಮದಲ್ಲಿ ಅವರು ಮೊದಲ ಬಾರಿಗೆ ಮತ ಚಲಾಯಿಸುವ ಯುವಜನತೆ ದೇಶಕ್ಕಾಗಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕೋರಿದ್ದರು.