ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಸಂಸತ್ತಿನಲ್ಲಿ ಸಮಗ್ರ ಹೇಳಿಕೆ ನೀಡಬೇಕು: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ‘ಸಮಗ್ರ’ ಹೇಳಿಕೆಯನ್ನು ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಈಶಾನ್ಯ ಭಾರತದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ ಮತ್ತು ಮಣಿಪುರ ಹಿಂಸಾಚಾರದ ಪರಿಣಾಮಗಳು ಇತರ ರಾಜ್ಯಗಳಿಗೂ ಹರಡುತ್ತಿರುವಂತೆ ಕಂಡುಬರುತ್ತಿದೆ ಎಂದಿರುವ ಅವರು,ಇದು ದೇಶದ ಸೂಕ್ಷ್ಮ ಗಡಿರಾಜ್ಯಗಳಿಗೆ ಒಳ್ಳೆಯದಲ್ಲ ಎಂದು ಒತ್ತಿ ಹೇಳಿದ್ದಾರೆ.
ಮಣಿಪುರದಲ್ಲಿ 83 ದಿನಗಳ ನಿರಂತರ ಹಿಂಸಾಚಾರವು ಪ್ರಧಾನಿಯವರು ಸಂಸತ್ತಿನಲ್ಲಿ ಸಮಗ್ರ ಹೇಳಿಕೆ ನೀಡುವುದನ್ನು ಅಗತ್ಯವಾಗಿಸಿದೆ ಎಂದು ಟ್ವೀಟಿಸಿರುವ ಖರ್ಗೆ,ಭಯಾನಕ ಕಥೆಗಳು ಈಗ ನಿಧಾನವಾಗಿ ಹೊರಬರುತ್ತಿವೆ. ಮಣಿಪುರ ಹಿಂಸಾಚಾರ ಕುರಿತು ಮೋದಿ ಸರಕಾರದಿಂದ ಉತ್ತರಗಳಿಗಾಗಿ ‘ಇಂಡಿಯಾ’ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.
ಮೋದಿ ತನ್ನ ಪ್ರತಿಷ್ಠೆಯನ್ನು ತೊರೆಯಲು ಮತ್ತು ಮಣಿಪುರ ವಿಷಯದಲ್ಲಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇದು ಸಕಾಲವಾಗಿದೆ ಎಂದೂ ಅವರು ಹೇಳಿದ್ದಾರೆ.