ಉಚಿತಗಳು ದೇಶಕ್ಕೆ ಒಳ್ಳೆಯದು ಎಂದು ಪ್ರಧಾನಿ ಈಗ ಒಪ್ಪಿಕೊಳ್ಳಬೇಕು : ಬಿಜೆಪಿಯ ಚುನಾವಣಾ ಪ್ರಣಾಳಿಕೆ ಕುರಿತು ಕೇಜ್ರಿವಾಲ್ ದಾಳಿ

ಅರವಿಂದ್ ಕೇಜ್ರಿವಾಲ್ | PTI
ಹೊಸದಿಲ್ಲಿ : ಬಿಜೆಪಿಯು ತನ್ನ ದಿಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಆಪ್ ನಕಲು ಮಾಡಿದೆ ಮತ್ತು ಹಲವಾರು ಉಚಿತ ಕೊಡುಗೆಗಳನ್ನು ಪ್ರಕಟಿಸಿದೆ. ಆದರೆ ತನ್ನ ಪಕ್ಷದ ಈ ‘ಉಚಿತ’ಗಳ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪುತ್ತಾರೆಯೇ ಎಂದು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಇಲ್ಲಿ ಪ್ರಶ್ನಿಸಿದರು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಫೆ.5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ತನ್ನ ಪಕ್ಷದ ಪ್ರಣಾಳಿಕೆಯನ್ನು ಪ್ರಕಟಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್,ಉಚಿತ ಕೊಡುಗೆಗಳಿಗಾಗಿ ತನ್ನನ್ನು ಟೀಕಿಸಿದ್ದು ತಪ್ಪು ಎಂದು ಮೋದಿ ಈಗ ಒಪ್ಪಿಕೊಳ್ಳಬೇಕು ಎಂದರು.
ಕೇಸರಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು,‘ಕೇಜ್ರಿವಾಲ್ ಉಚಿತ ಕೊಡುಗೆಗಳನ್ನು ನೀಡುತ್ತಾರೆ ಎಂದು ಬಿಜೆಪಿ ಪದೇಪದೇ ಹೇಳಿದೆ,ಆದರೆ ಇಂದು ಅದರ ರಾಷ್ಟ್ರಾಧ್ಯಕ್ಷರೇ ದಿಲ್ಲಿಯ ಜನರಿಗೆ ತಾವೂ ಉಚಿತ ಕೊಡುಗೆಗಳನ್ನು ನೀಡುವುದಾಗಿ ಪ್ರಕಟಿಸಿದ್ದಾರೆ. ಮೋದಿ ನಮ್ಮ ಬಗ್ಗೆ ಹೇಳಿದ್ದು ತಪ್ಪು ಎನ್ನುವುದನ್ನು ಬಿಜೆಪಿ ಒಪ್ಪಿಕೊಳ್ಳಬೇಕು. ಉಚಿತ ಕೊಡುಗೆಗಳು ತಪ್ಪಲ್ಲ ಎಂದೂ ಅವರು ಒಪ್ಪಿಕೊಳ್ಳಬೇಕು,ಅವು ದೇವರ ಕೊಡುಗೆಗಳಾಗಿವೆ ಮತ್ತು ದೇಶಕ್ಕೆ ಒಳ್ಳೆಯದು ಎಂದರು.
‘ಬಿಜೆಪಿಯ ಈ ಉಚಿತ ಕೊಡುಗೆಗಳಿಗೆ ತನ್ನ ಒಪ್ಪಿಗೆಯಿದೆ ಎಂದು ಮೋದಿ ಭರವಸೆ ನೀಡಬೇಕು ಮತ್ತು ನಾನು ಉಚಿತಗಳನ್ನು ನೀಡಿದ್ದು ಸರಿ ಎಂದು ಹೇಳಬೇಕು’ ಎಂದ ಅವರು, ಆಪ್ ಈಗಾಗಲೇ ನೀಡಿರುವ ಭರವಸೆಗಳನ್ನೇ ಬಿಜೆಪಿ ನೀಡಿದೆ,ಹಿಗಿರುವಾಗ ಅದಕ್ಕೇಕೆ ಮತ ನೀಡಬೇಕು ಎಂದು ಪ್ರಶ್ನಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿಲ್ಲ ಎಂದು ಟೀಕಿಸಿದ ಕೇಜ್ರಿವಾಲ್,ಅದನ್ನು ಸುಳ್ಳುಗಳ ಕಂತೆ ಎಂದು ಬಣ್ಣಿಸಿದರು.