ಪ್ರಧಾನಿಗೆ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ಅಮಿತ್ ಶಾ ಅವರನ್ನು ಮಧ್ಯರಾತ್ರಿಯೊಳಗೆ ವಜಾ ಮಾಡಬೇಕು : ಮಲ್ಲಿಕಾರ್ಜುನ ಖರ್ಗೆ ಆಗ್ರಹ
PC : PTI
ಹೊಸದಿಲ್ಲಿ: ದಲಿತ ಸಮುದಾಯದಿಂದ ಬಂದಿರುವ ದೇಶದ ಮಹಾನ್ ನಾಯಕ ಬಿ. ಆರ್. ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ನಲ್ಲಿ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸಚಿವರು ರಾಜೀನಾಮೆ ನೀಡಬೇಕೆಂದು ಬುಧವಾರ ಒತ್ತಾಯಿಸಿದ್ದಾರೆ.
‘‘ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವಮಾನಿಸಿದ್ದಾರೆ. ಅವರು ಬಾಬಾ ಸಾಹೇಬ್ ಅಂಬೇಡ್ಕರ್ರ ಸಂವಿಧಾನವನ್ನು ಗೌರವಿಸುವುದಿಲ್ಲ ಎನ್ನುವುದನ್ನು ಅವರ ಮನುಸ್ಮತಿ ಮತ್ತು ಆರ್ಎಸ್ಎಸ್ ಸಿದ್ಧಾಂತವು ಸ್ಪಷ್ಟಪಡಿಸಿದೆ. ನಾವು ಇದನ್ನು ಖಂಡಿಸುತ್ತೇವೆ ಮತ್ತು ಅವರ ರಾಜೀನಾಮೆಗೆ ಒತ್ತಾಯಿಸುತ್ತೇವೆ. ಅವರು ದೇಶದ ಜನತೆಯ ಕ್ಷಮೆ ಕೇಳಬೇಕು. ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’’ ಎಂದು ಖರ್ಗೆ ಹೇಳಿದರು.
ಅಂಬೇಡ್ಕರ್ ಹೆಸರು ಹೇಳುವುದು ಕಾಂಗ್ರೆಸ್ಗೆ ಫ್ಯಾಶನ್ ಆಗಿದೆ ಎಂದು ಅಮಿತ್ ಶಾ ಮಂಗಳವಾರ ಹೇಳಿದ್ದರು. ‘‘ಅವರು ಅಂಬೇಡ್ಕರ್ ಹೆಸರು ಹೇಳುವುದರ ಬದಲಿಗೆ ಅಷ್ಟೇ ಸಲ ದೇವರ ಹೆಸರು ಹೇಳಿದ್ದರೆ, ಅವರಿಗೆ ಏಳು ಜನ್ಮಗಳ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’’ ಎಂದು ಶಾ ಹೇಳಿದ್ದರು.
ಕಾಂಗ್ರೆಸ್ ಬುಧವಾರ, ಅಮಿತ್ ಶಾ ಹೇಳಿಕೆಯ ವಿರುದ್ಧ ಸಂಸತ್ನಲ್ಲಿ ಪ್ರಬಲ ಪ್ರತಿಭಟನೆ ನಡೆಸಿತು.
ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಬಿಜೆಪಿ ಆಳ್ವಿಕೆಯಲ್ಲಿ ಅಂಬೇಡ್ಕರ್ ಹೇಳುವುದು ಅಪರಾಧವಾಗಿದೆ ಎಂದು ಹೇಳಿದರು.
‘‘ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಮಾತನಾಡುತ್ತಿದ್ದಾಗ, ‘ನೀವು ಅಂಬೇಡ್ಕರ್ ಹೆಸರನ್ನು 100 ಸಲ ಪಠಿಸುತ್ತೀರಿ, ಇಷ್ಟು ಬಾರಿ ನೀವು ದೇವರ ಹೆಸರನ್ನು ಹೇಳಿದ್ದರೆ ನೀವು ಸ್ವರ್ಗಕ್ಕೆ 7 ಬಾರಿ ಹೋಗಬಹುದಾಗಿತ್ತು’ ಎಂದು ಅವರು ಹೇಳಿದ್ದಾರೆ. ಅಂದರೆ, ಇದರ ಅರ್ಥ ಬಾಬಾ ಸಾಹೇಬರ ಹೆಸರನ್ನು ಹೇಳುವುದು ಅಪರಾಧ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ವಿರೋಧಿಸುವುದು ಅವರ ಉದ್ದೇಶವಾಗಿದೆ. ನಾನು ಇದನ್ನು ಪ್ರತಿಭಟಿಸಿದೆ. ಆದರೆ, ನನಗೆ ಮಾತನಾಡಲು ಅವಕಾಶ ನೀಡಲಿಲ್ಲ’’ ಎಂದು ಖರ್ಗೆ ಹೇಳಿದರು.
ಬಾಬಾಸಾಹೇಬರ ಅನುಯಾಯಿಗಳಿಗೆ ಮಾಡಿದ ಅವಮಾನ: ಮಮತಾ ಬ್ಯಾನರ್ಜಿ
ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ರನ್ನು ಅವಮಾನಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘‘ಸಂವಿಧಾನದ ಭವ್ಯ 75 ವರ್ಷಗಳ ಇತಿಹಾಸದ ಬಗ್ಗೆ ಸಂಸತ್ನಲ್ಲಿ ಚರ್ಚೆ ನಡೆಯುತ್ತಿರುವಾಗಲೇ, ಸಂವಿಧಾನದ ರೂವಾರಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ, ಅದು ಕೂಡ ಪ್ರಜಾಪ್ರಭುತ್ವದ ದೇಗುಲದಲ್ಲಿ. ಇದು ಬಾಬಾಸಾಹೇಬರ ವ್ಯಕ್ತ್ತಿತ್ವಕ್ಕೆ ಮಸಿ ಬಳಿಯುವ ಯತ್ನವಾಗಿದೆ’’ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘‘ಇದು ಬಿಜೆಪಿಯ ಜಾತಿವಾದಿ ಮತ್ತು ದಲಿತ ವಿರೋಧಿ ಮನೋಸ್ಥಿತಿಯನ್ನು ಬಯಲುಗೊಳಿಸಿದೆ. 240 ಸ್ಥಾನಗಳಿಗೆ ಕುಸಿದ ಬಳಿಕವೂ ಅವರು ಹೀಗೆ ವರ್ತಿಸುತ್ತಾರಾದರೆ, 400 ಸ್ಥಾನಗಳನ್ನು ದಾಟುವ ಅವರ ಕನಸೇನಾದರು ನನಸಾಗಿದ್ದರೆ ಅವರು ಮಾಡಬಹುದಾಗಿದ್ದ ಹಾನಿಯ ಬಗ್ಗೆ ಯೋಚಿಸಿ. ಅವರು ಡಾ. ಅಂಬೇಡ್ಕರ್ರ ದೇಣಿಗೆಗಳನ್ನು ಸಂಪೂರ್ಣವಾಗಿ ಅಳಿಸಿ ಇತಿಹಾಸವನ್ನು ಬದಲಿಸುತ್ತಿದ್ದರು’’ ಎಂದು ಬ್ಯಾನರ್ಜಿ ಹೇಳಿದ್ದಾರೆ.
‘‘ಗೃಹ ಸಚಿವ ಅಮಿತ್ ಶಾರ ಹೇಳಿಕೆಗಳು, ಬಾಬಾಸಾಹೇಬ್ರನ್ನು ಆರಾಧಿಸುವ ಕೋಟ್ಯಂತರ ಜನರಿಗೆ ಮಾಡಿದ ಅವಮಾನವಾಗಿದೆ. ಆದರೆ, ದ್ವೇಷ ಮತ್ತು ಅಸಹಿಷ್ಣುತೆಯನ್ನು ಆಂತರಿಕ ನೀತಿಯನ್ನಾಗಿ ಮಾಡಿಕೊಂಡಿರುವ ಪಕ್ಷವೊಂದರಿಂದ ನಾವು ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?’’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ.
‘‘ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಜನಕ. ಗೃಹ ಸಚಿವರ ಈ ದಾಳಿಯು ಕೇವಲ ಅವರ ಮೇಲೆ ಮಾತ್ರವಲ್ಲ, ಸಂವಿಧಾನ ಕರಡು ಸಮಿತಿಯ ಎಲ್ಲಾ ಸದಸ್ಯರ ಮೇಲಿನ ದಾಳಿಯಾಗಿದೆ. ಆ ಸಮಿತಿಯಲ್ಲಿ ಎಲ್ಲಾ ಜಾತಿಗಳು, ಜನಾಂಗಗಳು ಮತ್ತು ಧರ್ಮಗಳ ಪ್ರತಿನಿಧಿಗಳಿದ್ದು, ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಸಂಕೇತಿಸುತ್ತಿತ್ತು’’ ಎಂದು ಅವರು ಹೇಳಿದ್ದಾರೆ.
ಸುಳ್ಳುಗಳ ಮೂಲಕ ಅಂಬೇಡ್ಕರ್ರಿಗೆ ಮಾಡಿರುವ ಅವಮಾನಗಳನ್ನು ಕಾಂಗ್ರೆಸ್ ಮರೆಮಾಚಲು ಸಾಧ್ಯವಿಲ್ಲ : ಪ್ರತಿಪಕ್ಷಗಳ ಪ್ರತಿಭಟನೆಗೆ ನರೇಂದ್ರ ಮೋದಿ ಪ್ರತಿಕ್ರಿಯೆ
ಬಾಬಾಸಾಹೇಬ್ ಅಂಬೇಡ್ಕರ್ರನ್ನು ‘‘ಅವಮಾನ ಮಾಡಿರುವುದಕ್ಕಾಗಿ’’ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ಬುಧವಾರ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ದಲಿತ ನಾಯಕನ ಪರಂಪರೆಯನ್ನು ಅಳಿಸಿಹಾಕಲು ಕಾಂಗ್ರೆಸ್ ಕೊಳಕು ತಂತ್ರಗಾರಿಕೆಗಳನ್ನು ಮಾಡಿತ್ತು ಎಂದು ಆರೋಪಿಸಿದ್ದಾರೆ.
‘‘ತಮ್ಮ ದುರುದ್ದೇಶಪೂರಿತ ಸುಳ್ಳುಗಳು ಹಲವು ವರ್ಷಗಳ ತಮ್ಮ ದುಷ್ಕೃತ್ಯವನ್ನು, ಅದರಲ್ಲೂ ಮುಖ್ಯವಾಗಿ ತಾವು ಡಾ. ಅಂಬೇಡ್ಕರ್ರಿಗೆ ಮಾಡಿರುವ ಅವಮಾನಗಳನ್ನು ಮರೆಮಾಚಬಹುದು ಎಂಬುದಾಗಿ ಕಾಂಗ್ರೆಸ್ ಮತ್ತು ಅದರ ಕೊಳೆತ ಪರಿಸರ ವ್ಯವಸ್ಥೆ ಭಾವಿಸಿದ್ದರೆ, ಅವರು ತಪ್ಪು ತಿಳಿದುಕೊಂಡಿದ್ದಾರೆ’’ ಎಂದು ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ.
‘‘ಡಾ. ಅಂಬೇಡ್ಕರ್ರ ಪರಂಪರೆಯನ್ನು ನಾಶಗೊಳಿಸಲು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡವನ್ನು ಅವಮಾನಿಸಲು ಒಂದು ಕುಟುಂಬದ ನೇತೃತ್ವದ ಪಕ್ಷವೊಂದು ಹೇಗೆ ಸಾಧ್ಯವಿರುವ ಎಲ್ಲಾ ಕೊಳಕು ತಂತ್ರಗಾರಿಕೆಗಳಲ್ಲಿ ತೊಡಗಿತ್ತು ಎನ್ನುವುದನ್ನು ಭಾರತ ಜನರು ಪದೇ ಪದೇ ನೋಡಿದ್ದಾರೆ’’ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಲಿಲ್ಲ ಎಂದು ಪ್ರಧಾನಿ ಆರೋಪಿಸಿದರು.
‘‘ಕಾಂಗ್ರೆಸ್ ಅಂಬೇಡ್ಕರ್ರನ್ನು ಚುನಾವಣೆಗಳಲ್ಲಿ ಒಂದಲ್ಲ, ಎರಡು ಬಾರಿ ಸೋಲಿಸಿತು, ಪಂಡಿತ್ ನೆಹರೂ, ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿದರು ಮತ್ತು ಅವರ ಸೋಲನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡರು, ಕಾಂಗ್ರೆಸ್ ಅಂಬೇಡ್ಕರ್ಗೆ ಭಾರತ ರತ್ನ ಪ್ರಶಸ್ತಿಯನ್ನು ನಿರಾಕರಿಸಿತು, ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಅಂಬೇಡ್ಕರ್ರ ಚಿತ್ರಕ್ಕೆ ಗೌರವದ ಸ್ಥಾನವನ್ನು ನಿರಾಕರಿಸಿತು- ಇವು ಡಾ. ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ನಡೆಸಿದ ಪಾಪಕೃತ್ಯಗಳ ಪೈಕಿ ಕೆಲವು’’ ಎಂಬುದಾಗಿ ಮೋದಿ ಬರೆದಿದ್ದಾರೆ.
‘‘ಕಾಂಗ್ರೆಸ್ ತನಗೆ ಬೇಕಾದಂತೆ ಮಾಡಬಹುದು. ಆದರೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿರುದ್ಧದ ಅತ್ಯಂತ ಹೇಯ ಹತ್ಯಾಕಾಂಡಗಳು ನಡೆದಿರುವುದು ತಮ್ಮ ಆಡಳಿತಗಳ ಸುಪರ್ದಿಯಲ್ಲಿ ಎನ್ನುವುದನ್ನು ಅವರು ನಿರಾಕರಿಸಲು ಸಾಧ್ಯವಿಲ್ಲ. ಹಲವು ವರ್ಷಗಳ ಕಾಲ ಅವರು ಅಧಿಕಾರದಲ್ಲಿದ್ದರು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಬಲೀಕರಣಕ್ಕಾಗಿ ಮಹತ್ವದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ’’ ಎಂದು ಅವರು ಆರೋಪಿಸಿದರು.
‘ಭಾರತ ರತ್ನ’ ಕೊಡದೆ ಕಾಂಗ್ರೆಸ್ ಅಂಬೇಡ್ಕರ್ಗೆ ಅವಮಾನ ಮಾಡಿತ್ತು: ರಿಜಿಜು
‘ಭಾರತ ರತ್ನ’ ಪ್ರಶಸ್ತಿಯನ್ನು ನೀಡದಿರುವ ಮೂಲಕ ಮತ್ತು ಚುನಾವಣೆಯಲ್ಲಿ ಎರಡು ಬಾರಿ ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷವು ಬಾಬಾಸಾಹೇಬ್ ಅಂಬೇಡ್ಕರ್ರಿಗೆ ಅವಮಾನ ಮಾಡಿತ್ತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಆರೋಪಿಸಿದ್ದಾರೆ.
‘‘ಕಾಂಗ್ರೆಸ್ ಪಕ್ಷವು ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಅಂಬೇಡ್ಕರ್ರಿಗೆ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲ. ಅದೂ ಅಲ್ಲದೆ, ಅಂಬೇಡ್ಕರ್ ವಿರುದ್ಧ ಪಿತೂರಿ ಮಾಡಿದ ಕಾಂಗ್ರೆಸ್ 1952ರಲ್ಲಿ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವಮಾನಿಸಿತು. ಬಳಿಕ ವಿದರ್ಭದಲ್ಲಿ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಅವರನ್ನು ಸೋಲಿಸಿತು. ಕಾಂಗ್ರೆಸ್ ಅವರನ್ನು ಸೋಲಿಸದೆ ಇದ್ದಿದ್ದರೆ, 1952ರ ಬಳಿಕವೂ ಬಾಬಾಸಾಹೇಬ್ ಸಂಸತ್ನಲ್ಲಿರುತ್ತಿದ್ದರು’’ ಎಂದು ರಿಜಿಜು ಹೇಳಿದರು.
ಗೃಹ ಸಚಿವರ ಹೇಳಿಕೆಯನ್ನು ಪ್ರತಿಪಕ್ಷಗಳು ತಿರುಚುತ್ತಿವೆ ಎಂದು ರಿಜಿಜು ಆರೋಪಿಸಿದರು. ‘‘ಅಮಿತ್ ಶಾ ಅವರ ರಾಜ್ಯಸಭಾ ಭಾಷಣದ ಸಣ್ಣ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸುತ್ತಿದೆ. ಅದರಲ್ಲಿ ಅಮಿತ್ ಶಾರ ಹೇಳಿಕೆಗಳನ್ನು ತಿರುಚಲಾಗಿದೆ. ಅದು ತಪ್ಪು, ಅದನ್ನು ನಾನು ಖಂಡಿಸುತ್ತೇನೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಅಮಿತ್ ಶಾ ವಿರುದ್ಧ ತೃಣಮೂಲ ಕಾಂಗ್ರೆಸ್ನಿಂದ ಹಕ್ಕುಚ್ಯುತಿ ನೋಟಿಸ್
ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಬಗ್ಗೆ ಆಡಿರುವ ಮಾತುಗಳಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ನಾಯಕ ಡೆರೆಕ್ ಒಬ್ರಿಯನ್ ಬುಧವಾರ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ರಾಜ್ಯಸಭೆಯ ವಿಧಿವಿಧಾನಗಳು ಮತ್ತು ಕಲಾಪ ನಿರ್ವಹಣಾ ನಿಯಮಗಳ ನಿಯಮ 187ರಡಿ ನೋಟಿಸ್ ನೀಡಲಾಗಿದೆ ಎಂದು ಮೂಲವೊಂದು ತಿಳಿಸಿದೆ.
‘ಇಂಡಿಯಾ’ ಸಂಸದರಿಂದ ಪ್ರತಿಭಟನೆ
ಡಾ. ಬಿ. ಆರ್. ಅಂಬೇಡ್ಕರ್ರಿಗೆ ಮಾಡಿರುವ ‘‘ಅವಮಾನಕ್ಕಾಗಿ’’ ಗೃಹ ಸಚಿವ ಅಮಿತ್ ಶಾ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಹಲವು ಸಂಸದರು ಬುಧವಾರ ಸಂಸತ್ ಆವರಣದಲ್ಲಿ ಧರಣಿ ನಡೆಸಿದರು.
ಸಂಸದರು ಅಂಬೇಡ್ಕರ್ರ ಚಿತ್ರಗಳನ್ನು ಹಿಡಿದುಕೊಂಡು ಸಂಸತ್ನ ಮಕರ ದ್ವಾರದ ಮೆಟ್ಟಿಲುಗಳ ಎದುರು ಸಾಲಾಗಿ ನಿಂತರು. ಕಾಂಗ್ರೆಸ್, ಡಿಎಮ್ಕೆ, ಆರ್ಜೆಡಿ, ಎಡ ಪಕ್ಷಗಳು, ಆಪ್ ಸೇರಿದಂತೆ ಹಲವು ಪಕ್ಷಗಳ ಸಂಸದರು ಧರಣಿಯಲ್ಲಿ ಪಾಲ್ಗೊಂಡರು.
ಅವರು ‘‘ಜೈ ಭೀಮ್’’, ‘‘ಸಂಘ ಕಾ ವಿಧಾನ ನಹೀ ಚಲೇಗ’’ (ಆರ್ಎಸ್ಎಸ್ ವರ್ತನೆ ನಡೆಯುವುದಿಲ್ಲ) ಮತ್ತು ‘‘ಅಮಿತ್ ಶಾ ಮಾಫಿ ಮಾಂಗೊ’’ (ಅಮಿತ್ ಶಾ ಕ್ಷಮೆ ಕೇಳಿ) ಮುಂತಾದ ಘೋಷಣೆಗಳನ್ನು ಕೂಗಿದರು.
ಅಂಬೇಡ್ಕರ್ರ ಕೊಡುಗೆ ಮತ್ತು ಸಂವಿಧಾನವನ್ನು ಮುಗಿಸುವುದೇ ಅವರ ಪೂರ್ಣಾವಧಿ ಕೆಲಸ: ರಾಹುಲ್
ದೇಶವು ಬಾಬಾ ಸಾಹೇಬರ ಅವಮಾನವನ್ನು ಸಹಿಸುವುದಿಲ್ಲ ಎಂದು ಬುಧವಾರ ಹೇಳಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಅಂಬೇಡ್ಕರ್ ಬಗ್ಗೆ ಆಡಿರುವ ಮಾತುಗಳಿಗಾಗಿ ಗೃಹ ಸಚಿವ ಅಮಿತ್ ಶಾ ಕ್ಷಮೆ ಕೋರಬೇಕು ಎಂದು ಹೇಳಿದ್ದಾರೆ.
ಬಿಜೆಪಿಯು ಅಂಬೇಡ್ಕರ್ ಮತ್ತು ಅವರ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
‘‘ಬಾಬಾ ಸಾಹೇಬರು ಸಂವಿಧಾನ ಶಿಲ್ಪಿ. ಅವರು ದೇಶ ಮುಂದುವರಿಯಲು ದಿಕ್ಕು ತೋರಿಸಿದ ಮಹಾನ್ ವ್ಯಕ್ತಿ. ಅವರ ಅವಮಾನವನ್ನು ಅಥವಾ ಅವರು ರೂಪಿಸಿದ ಸಂವಿಧಾನದ ಅವಮಾನವನ್ನು ದೇಶವು ಸಹಿಸುವುದಿಲ್ಲ. ಗೃಹ ಸಚಿವರು ಕ್ಷಮೆ ಕೋರಬೇಕು’’ ಎಂದು ಫೇಸ್ಬುಕ್ನಲ್ಲಿ ಹಾಕಿದ ಸಂದೇಶವೊಂದರಲ್ಲಿ ರಾಹುಲ್ ಹೇಳಿದ್ದಾರೆ.
ಬಳಿಕ, ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಅವರು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ. ತಾವು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಅವರು ಮೊದಲು ಹೇಳಿದ್ದರು. ಅವರು ಅಂಬೇಡ್ಕರ್ ಮತ್ತು ಅವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾರೆ. ಅಂಬೇಡ್ಕರ್ರ ಕೊಡುಗೆ ಮತ್ತು ಸಂವಿಧಾನವನ್ನು ಮುಗಿಸುವುದೇ ಅವರ ಪೂರ್ಣಾವಧಿ ಕೆಲಸ. ಅದು ಇಡೀ ದೇಶಕ್ಕೆ ಗೊತ್ತಿದೆ’’ ಎಂದು ರಾಹುಲ್ ನುಡಿದರು.