ಮಾನವೀಯ ನೆರವು ಮುಂದುವರಿಸಲಿದ್ದೇವೆ: ಫೆಲೆಸ್ತೀನ್ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ
ಫೈಲ್ ಫೋಟೊ | indiatoday
ಹೊಸದಿಲ್ಲಿ: ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಕಾಳಗ ಮುಂದುವರಿದಿರುವ ಬೆನ್ನಿಗೇ ಭಾರತವು ಫೆಲೆಸ್ತೀನ್ ನಾಗರಿಕರಿಗೆ ಮಾನವೀಯ ನೆರವು ರವಾನಿಸುವುದನ್ನು ಮುಂದುವರಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಫೆಲೆಸ್ತೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಅವರಿಗೆ ಭರವಸೆ ನೀಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ಗುರುವಾರ ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೌದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಾಝಾ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟ ನಾಗರಿಕರಿಗೆ ಸಂತಾಪ ವ್ಯಕ್ತಪಡಿಸಿದರು.
ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೌದ್ ಅಬ್ಬಾಸ್ ರೊಂದಿಗೆ ಮಾತನಾಡಿದ ನಂತರ, “ಫೆಲೆಸ್ತೀನ್ ಪ್ರಾಂತ್ಯದಲ್ಲಿನ ಹಿಂಸಾಚಾರ ಮತ್ತು ಕುಸಿಯುತ್ತಿರುವ ಭದ್ರತಾ ಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಇಸ್ರೇಲ್-ಫೆಲೆಸ್ತೀನ್ ನಡುವಿನ ಬಿಕ್ಕಟ್ಟಿನ ಕುರಿತು ದೀರ್ಘಕಾಲದ ಭಾರತದ ನಿಲುವನ್ನು ಪುನರುಚ್ಚರಿಸಲಾಯಿತು” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ನಾಗರಿಕರ ಮೇಲೆ ಅಚ್ಚರಿಯ ದಾಳಿ ನಡೆಸಿದ ನಂತರ, ಇಸ್ರೇಲ್ ಮತ್ತು ಹಮಾಸ್ ನಡುವಿನ ಬಿಕ್ಕಟ್ಟು ಉಲ್ಬಣಿಸಿದೆ. ಇದಕ್ಕೆ ಪ್ರತಿಯಾಗಿ ಫೆಲೆಸ್ತೀನ್ ಮೇಲೆ ಯುದ್ಧ ಘೋಷಿಸಿರುವ ಇಸ್ರೇಲ್, ಗಾಝಾ ಪಟ್ಟಿಯಲ್ಲಿನ ಹಮಾಸ್ ಕಾರ್ಯಾಚರಣೆ ನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ವೈಮಾನಿಕ ದಾಳಿ ನಡೆಸುತ್ತಿದೆ.