ರಾಜಕೀಯ ಭಾಷಣಗಳನ್ನು ಮಾಡಲು ಪ್ರಧಾನಿ ಮೋದಿಯೇಕೆ ಸರಕಾರಿ ಕಾರ್ಯಕ್ರಮಗಳನ್ನು ಬಳಸಿಕೊಳ್ಳುತ್ತಿದ್ದಾರೆ? : ಕಾಂಗ್ರೆಸ್ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ಮಹಾರಾಷ್ಟ್ರದ ಅಭಿವೃದ್ಧಿ ಯೋಜನೆಗಳನ್ನು ವರ್ಚುಯಲ್ ಉದ್ಘಾಟನೆ ಮಾಡುವಾಗ ರಾಜಕೀಯ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ತೆರಿಗೆದಾರರ ದುಡ್ಡು ರಾಜಕೀಯ ಭಾಷಣಗಳಿಗೆ ವ್ಯಯಿಸಬಾರದು ಹಾಗೂ ವ್ಯಯವಾಗಬಾರದು ಎಂದು ಟೀಕಿಸಿದೆ.
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡ ಮರುದಿನ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷವಾದ ಕಾಂಗ್ರೆಸ್ ಹೊಣೆಗೇಡಿಯಾಗಿದ್ದು, ದ್ವೇಷದ ಕಾರ್ಖಾನೆಯಾಗಿದೆ ಎಂದು ಟೀಕಿಸಿದ್ದರು. ಹಿಂದೂಗಳನ್ನು ವಿಭಜಿಸಿ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಲು ಕಾಂಗ್ರೆಸ್ ಬಯಸುತ್ತಿದೆ ಎಂದೂ ದೂರಿದ್ದರು.
ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ ಅಧಿಕಾರ ಗಳಿಸಲು ಮಹಾರಾಷ್ಟ್ರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆದರೆ, ಆಡಳಿತಾರೂಢ ಮಹಾಯುತಿ ಸರಕಾರವು ರಾಜ್ಯವನ್ನು ಸಬಲೀಕರಣಗೊಳಿಸಲಿದೆ ಎಂದು ರಾಜ್ಯದಲ್ಲಿನ 7,600 ಕೋಟಿ ರೂ. ಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಉದ್ಘಾಟಿಸಿ ಮೋದಿ ಆರೋಪಿಸಿದ್ದರು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, “ಪ್ರಧಾನ ಮಂತ್ರಿಗಳ ಕಾರ್ಯಾಲಯವೇಕೆ ಸರಕಾರಿ ವೇದಿಕೆಯನ್ನು ಹಾಗೂ ಸರಕಾರಿ ಕಾರ್ಯಕ್ರಮವೊಂದನ್ನು ರಾಜಕೀಯ ಭಾಷಣ ಮಾಡಲು ಹಾಗೂ ವಿರೋಧ ಪಕ್ಷಗಳ ವಿರುದ್ಧ ದಾಳಿ ನಡೆಸಲು ಬಳಸಿಕೊಳ್ಳುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
“ತೆರಿಗೆದಾರರ ದುಡ್ಡನ್ನು ರಾಜಕೀಯ ಭಾಷಣಗಳಿಗೆ ವ್ಯಯ ಮಾಡಬಾರದು ಹಾಗೂ ವ್ಯಯ ಮಾಡುವಂತಿಲ್ಲ. ಅದಕ್ಕಾಗಿ ಅವರು ಬಿಜೆಪಿ ವೇದಿಕೆಯನ್ನು ಬಳಸಿಕೊಳ್ಳಬಹುದು” ಎಂದು ಕುಟುಕಿದ್ದಾರೆ.