ಡಿಸಿಎಂ ಏಕನಾಥ್ ಶಿಂಧೆ ಕುರಿತ ಹೇಳಿಕೆ ವಿವಾದ : ಕುನಾಲ್ ಕಾಮ್ರಾಗೆ ಮುಂಬೈ ಪೊಲೀಸರಿಂದ 2ನೇ ನೋಟಿಸ್

ಕಾಮಿಡಿಯನ್ ಕುನಾಲ್ ಕಾಮ್ರಾ Photo | hindustantimes
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಕುರಿತ ಹೇಳಿಕೆ ವಿವಾದಕ್ಕೆ ಸಂಬಂಧಿಸಿ ಕಾಮಿಡಿಯನ್ ಕುನಾಲ್ ಕಾಮ್ರಾಗೆ ಮುಂಬೈ ಪೊಲೀಸರು 2ನೇ ನೋಟಿಸ್ ಜಾರಿಗೊಳಿಸಿದ್ದಾರೆ.
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರು ನೀಡಿದ ದೂರಿನ ಮೇರೆಗೆ ಮುಂಬೈನ ಉಪನಗರದ ಖಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.
ಮಂಗಳವಾರ ಕುನಾಲ್ ಕಾಮ್ರಾಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮೊದಲ ನೋಟಿಸ್ ನೀಡಿದ್ದರು. ಮೊದಲ ನೋಟಿಸ್ ನಂತರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲು ಕಾಮಿಡಿಯನ್ ಒಂದು ವಾರದ ಸಮಯಾವಕಾಶವನ್ನು ಕೋರಿದ್ದರು ಎಂದು ಮೂಲಗಳು ತಿಳಿಸಿವೆ.
ದಿಲ್ ತೋ ಪಾಗಲ್ ಹೈ ಚಿತ್ರದ ಜನಪ್ರಿಯ ಹಿಂದಿ ಹಾಡನ್ನು ಕುನಾಲ್ ಕಾಮ್ರಾ ವಿಡಂಬನೆ ಮಾಡಿ ಏಕನಾಥ್ ಶಿಂದೆಯನ್ನು ಗದ್ದರ್(ದ್ರೋಹಿ) ಎಂದು ಹೇಳಿದರು. ಅವರ ಟೀಕೆಯು ಶಿಂದೆ ನೇತೃತ್ವದ ಶಿವಸೇನಾ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಆ ಬಳಿಕ ಶಿವಸೇನಾ ಕಾರ್ಯಕರ್ತರು ಮುಂಬೈನ ದಿ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸಗೊಳಿಸಿದರು.