ಹಿಮಾಲಯದಲ್ಲಿ 100 ಕೆ.ಜಿ ಪ್ರತಿಮೆ ಪ್ರತಿಷ್ಠಾಪನೆ: ಪತಂಜಲಿಯ ಪ್ರಯತ್ನವನ್ನು ತಡೆದ ಪೊಲೀಸರು
ಡೆಹ್ರಾಡೂನ್: ಸುಮಾರು ಒಂದು ಕ್ವಿಂಟಾಲ್ ತೂಕದ ಧನ್ವಂತರಿ ಪ್ರತಿಮೆಯನ್ನು ಉತ್ತರಕಾಶಿಯ ಹರ್ಷಿಲ್ ರಕ್ಷಿತಾರಣ್ಯಕ್ಕೆ ಒಯ್ದು ಪ್ರತಿಷ್ಠಾಪನೆ ಮಾಡುವ ಪ್ರಯತ್ನ ನಡೆಸಿದ ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಇದೀಗ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಅನುಮತಿ ಇಲ್ಲದೇ ಸುಮಾರು 1000 ಅಡಿ ಎತ್ತರದ ಹುಲ್ಲುಗಾವಲಿಗೆ ಪ್ರತಿಮೆಯನ್ನು ಒಯ್ಯಲಾಗಿದೆ ಎಂದು ಆಪಾದಿಸಲಾಗಿದೆ.
ಯೋಗಗುರು ರಾಮದೇವ್ ಅವರ ಅನುಯಾಯಿ ಬಾಲಕೃಷ್ಣ, ಧನ್ವಂತರಿ ಪ್ರತಿಮೆಯನ್ನು ಹರ್ಷಿಲ್ ಪ್ರದೇಶಕ್ಕೆ ಒಯ್ದು ಪ್ರತಿಷ್ಠಾಪಿಸುವ ಪ್ರಯತ್ನ ಅರಣ್ಯ ಇಲಾಖೆಗೆ ನಡುಕ ಹುಟ್ಟಿಸಿತ್ತು. ನೆಹರೂ ಪರ್ವತಾರೋಹಣ ಸಂಸ್ಥೆ ಮತ್ತು ಪತಂಜಲಿ ಆಯುರ್ವೇದ ಔಷಧಿಗಳನ್ನು ಹುಡುಕುವ ಸಲುವಾಗಿ ಆಚಾರ್ಯ ಬಾಲಕೃಷ್ಣ ಅವರ ಸಹಿತವಾಗಿ ಈ ಪ್ರದೇಶಕ್ಕೆ ತೆರಳಿತ್ತು.
"ಹಿಮಾಲಯ ಮತ್ತು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಆಚಾರ್ಯ ಬಾಲಕೃಷ್ಣ ಕೂಡಾ ಗಿಡಮೂಲಿಕೆಗಳನ್ನು ಹುಡುಕಿಕೊಂಡು ತೆರಳಿದ್ದರು. ಭವಿಷ್ಯದಲ್ಲಿ ಯಾವುದು ಸೂಕ್ತವೋ ಆ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ಸ್ವಾಮಿ ರಾಮದೇವ್ ಅವರ ವಕ್ತಾರ ಎಸ್.ಕೆ.ತಿಜರವಾಲಾ ಹೇಳಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ವಿಭಾಗೀಯ ಅರಣ್ಯ ಅಧಿಕಾರಿ ಡಿ.ಪಿ.ಬಲೂನಿ ಗಂಗೋತ್ರಿ ವಲಯ ಅರಣ್ಯ ಅಧಿಕಾರಿಗೆ ಸೂಚನೆ ನೀಡಿ, ಹುಲ್ಲುಗಾವಲಿಗೆ ಅನುಮತಿ ಇಲ್ಲದೇ ವಿಗ್ರಹವನ್ನು ಒಯ್ದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. "ಈ ಸಂಬಂಧ ಎಂಟು ಮಂದಿ ಅರಣ್ಯ ಸಿಬ್ಬಂದಿಯನ್ನು ಝಿಂದಾ ಹುಲ್ಲುಗಾವಲು ಪ್ರದೇಶಕ್ಕೆ ಕಳುಹಿಸಿ ವಿಗ್ರಹವನ್ನು ವಶಕ್ಕೆ ಪಡೆದು ಥರಾಲಿಗೆ ವಾಪಾಸು ತರುವಂತೆ ಆದೇಶಿಸಲಾಗಿದೆ" ಎಂದು ಆರ್ ಎಫ್ಓ ಜಗನ್ಮೋಹನ್ ಗಂಗಾನಿ ಸ್ಪಷ್ಟಪಡಿಸಿದ್ದಾರೆ.