ಅನಂತ್ ಅಂಬಾನಿ ವಿವಾಹಕ್ಕೆ ರಾಜಕಾರಣಿಗಳ ದಂಡು
PC: x.com/DainikBhaskar
ಹೊಸದಿಲ್ಲಿ: ಎಲ್ಲ ಪ್ರಾದೇಶಿಕ ಹಾಗೂ ಸೈದ್ಧಾಂತಿಕ ಭಿನ್ನತೆಗಳನ್ನು ಮೀರಿ ವಿವಿಧ ರಾಜಕೀಯ ಪಕ್ಷಗಳ ಎಲ್ಲ ಪ್ರಮುಖ ಮುಖಂಡರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ವಿವಾಹ ಸಮಾರಂಭದಲ್ಲಿ ನೂತನ ದಂಪತಿಗಳನ್ನು ಹರಸಿದರು. ದೇಶದ ಗಣ್ಯ ರಾಜಕಾರಣಿಗಳ ಉಪಸ್ಥಿತಿ ಈ ವೈಭವೋಪೇತ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.
ಸಾಂಪ್ರದಾಯಿಕ ಹಾಗೂ ವೈಭವೋಪೇತ ವಿವಾಹ ಮಹೋತ್ಸವದಲ್ಲಿ ರಾಜಕಾರಣಿಗಳು ತಮ್ಮ ರಾಜಕೀಯ ಭಿನ್ನತೆಯನ್ನು ಬದಿಗಿಟ್ಟು ಜತೆಯಾಗಿ ಸಂಭ್ರಮಿಸಿದರು. ಉದ್ಧವ್ ಠಾಕ್ರೆ ಕುಟುಂಬ, ಸ್ಮೃತಿ ಹಾಗೂ ಝುಬಿನ್ ಇರಾನಿ, ಸಲ್ಮಾನ್ ಖುರ್ಷಿದ್ ಕುಟುಂಬ, ರಾಮದಾಸ್ ಅಟಾವಳೆ, ಪ್ರಫುಲ್ ಪಟೇಲ್, ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಕುಟುಂಬ, ಏಕನಾಥ್ ಶಿಂಧೆ, ಲಾಲೂ ಪ್ರಸಾದ್ ಯಾದವ್ ಕುಟುಂಬ, ದೇವೇಂದ್ರ ಫಡ್ನವೀಸ್ ಕುಟುಂಬ, ಬಾಬಾ ರಾಮದೇವ್, ಅಖಿಲೇಶ್ ಯಾದವ್ ಕುಟುಂಬ, ರವಿಕಿಶನ್ ಹೀಗೆ ವಿವಿಧ ರಾಜಕೀಯ ಹಿನ್ನೆಲೆಗಳ ಗಣ್ಯರು ಸಮಾರಂಭ ಕಳೆಗಟ್ಟಲು ಕಾರಣರಾದರು.
ಇದು ವಿವಿಧ ರಾಜಕೀಯ ಪಕ್ಷಗಳ ಗಣ್ಯರ ಉಪಸ್ಥಿತಿಯ ಜತೆಗೆ ಅಂಬಾನಿ ಕುಟುಂಬದ ಸಾಮಾಜಿಕ ಬಾಂಧವ್ಯವನ್ನೂ ಬಿಂಬಿಸಿತು. ನೂತನ ದಂಪತಿ ಬಾಳಿನ ಹೊಸ ಅಧ್ಯಾಯದ ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ರಾಜಕಾರಣಿಗಳು ಭವ್ಯ ಭವಿಷ್ಯವನ್ನು ಹಾರೈಸಿದರು.