ಬಡತನ ಮಟ್ಟ ಶೇಕಡ 5ಕ್ಕೆ ಇಳಿದಿದೆ ಎಂದ ನೀತಿ ಆಯೋಗ ಸಿಇಓ!
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಗ್ರಾಮೀಣ ಭಾರತದಲ್ಲಿ ಬಳಕೆ ಪ್ರಮಾಣ ಆಕರ್ಷಕವಾಗಿದ್ದು, ನಗರದ ಜತೆಗಿನ ಅಂತರ ಕಡಿಮೆಯಾಗುತ್ತಿದೆ ಎನ್ನುವ ಅಂಶ ಕುಟುಂಬಗಳ ಬಳಕೆ ವೆಚ್ಚದ ಬಗೆಗಿನ ಇತ್ತೀಚಿನ ಸಮೀಕ್ಷೆಯಲ್ಲಿ ದೃಢಪಟ್ಟಿದ್ದು, ಇದು ದೇಶದಲ್ಲಿ ಬಡತನ ಮಟ್ಟ ಗಣನೀಯವಾಗಿ ಇಳಿದಿರುವುದರ ಸಂಕೇತ ಎಂದು ನೀತಿ ಆಯೋಗದ ಸಿಇಓ ಹೇಳಿದ್ದಾರೆ. "ಈ ಅಂಕಿ ಅಂಶಗಳ ಆಧಾರದಲ್ಲಿ ದೇಶದಲ್ಲಿ ಬಡತನ ಮಟ್ಟ ಶೇಕಡ 5ರಷ್ಟು ಅಥವಾ ಅದಕ್ಕಿಂತಲೂ ಕಡಿಮೆ ಇದೆ" ಎಂದು ಬಿವಿಆರ್ ಸುಬ್ರಹ್ಮಣ್ಯಂ ದೃಢಪಡಿಸಿದ್ದಾರೆ. ಈ ಅಂಕಿ ಅಂಶಗಳ ಆಧಾರದಲ್ಲಿ ಗ್ರಾಮೀಣ ಅಭಾವ ಬಹುತೇಕ ಕಡಿಮೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಹಾರ ಮತ್ತು ಬೇಳೆಕಾಳುಗಳ ಪಾಲು ಚಿಲ್ಲರೆ ಹಣದುಬ್ಬರ ಸೂಚ್ಯಂಕದಲ್ಲಿ ಕಡಿಮೆ ಇದ್ದು, ಈ ಅಂಕಿ ಅಂಶಗಳು ಆರ್ಬಿಐ ನಿಗದಿಪಡಿಸುವ ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಗ್ರಾಮೀಣ ಆರ್ಥಿಕತೆ ಬಗೆಗೆ ಇದ್ದ ಸಂದೇಹಗಳನ್ನು ಇದು ನಿವಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಡತನ ಮಟ್ಟವನ್ನು ಬಳಕೆ ವೆಚ್ಚದ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ ಹಾಗೂ ದೇಶದಲ್ಲಿ ಬಡವರ ಸಂಖ್ಯೆ ಬಗೆಗೆ ತೀಕ್ಷ್ಣ ಚರ್ಚೆಗಳು ನಡೆಯುತ್ತಲೇ ಇವೆ. 2017-18ರ ಅವಧಿಯಲ್ಲಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ಇದು 2011-12ರ ಬಳಿಕ ಬಿಡುಗಡೆಯಾದ ಇತ್ತೀಚಿನ ಅಂಕಿ ಅಂಶಗಳಾಗಿವೆ.
2011-12ರಲ್ಲಿ ಗ್ರಾಮೀಣ ಭಾರತದ ಜನತೆ ಆಹಾರಕ್ಕಾಗಿ ಮಾಡುತ್ತಿದ್ದ ವೆಚ್ಚ ಶೇಕಡ 53ರಷ್ಟಾಗಿದ್ದರೆ, 2022-23ರಲ್ಲಿ ಇದು ಶೇಕಡ 46.4ಕ್ಕೆ ಇಳಿದಿದೆ. ಗ್ರಾಮೀಣ ಹಾಗೂ ನಗರ ಬಳಕೆಯಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಆಹಾರೇತರ ಸಾಮಗ್ರಿಗಳ ಮೇಲಿನ ವೆಚ್ಚ ಅಂದರೆ ಫ್ರಿಡ್ಜ್, ಟಿವಿ, ಪಾನೀಯಗಳು ಮತ್ತು ಸಂಸ್ಕರಿತ ಆಹಾರ, ವೈದ್ಯಕೀಯ ವೆಚ್ಚ ಹಾಗೂ ಸಾರಿಗೆಗೆ ಮಾಡುವ ವೆಚ್ಚ ಏರಿಕೆಯಾಗಿದೆ.