2012ರಲ್ಲಿ ಪ್ರಣಬ್ ಮುಖರ್ಜಿಯನ್ನು ಪ್ರಧಾನಿ ಮಾಡಿ, ಮನಮೋಹನ್ ಸಿಂಗ್ರನ್ನು ರಾಷ್ಟ್ರಪತಿ ಹುದ್ದೆಗೇರಿಸಬೇಕಿತ್ತು: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್ | PC : PTI
ಹೊಸ ದಿಲ್ಲಿ: 2012ರಲ್ಲಿ ಪ್ರಣಬ್ ಮುಖರ್ಜಿಯನ್ನು ಯುಪಿಎ-2 ಅವಧಿಯ ಪ್ರಧಾನಿಯನ್ನಾಗಿ ಮಾಡಿ, ಖಾಲಿ ಇದ್ದ ರಾಷ್ಟ್ರಪತಿ ಹುದ್ದೆಗೆ ಡಾ. ಮನಮೋಹನ್ ಸಿಂಗ್ ಅವರನ್ನು ನೇಮಿಸಬೇಕಿತ್ತು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ತಮ್ಮ ನೂತನ ಕೃತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಆಗ ಈ ಕ್ರಮವನ್ನೇನಾದರೂ ಕೈಗೊಂಡಿದ್ದರೆ, ಸರಕಾರದ ಆಡಳಿತವು ಪಾರ್ಶ್ವವಾಯುಗೆ ತುತ್ತಾಗುತ್ತಿರಲಿಲ್ಲ ಎಂದು 83 ವರ್ಷದ ಅಯ್ಯರ್ ತಮ್ಮ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.
2012ರಲ್ಲಿ ಡಾ. ಮನಮೋಹನ್ ಅವರನ್ನೇ ಪ್ರಧಾನಿಯನ್ನಾಗಿ ಉಳಿಸಿಕೊಂಡು, ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸಿದ್ದರಿಂದ, ಯುಪಿಎ-3 ಅಧಿಕಾರಕ್ಕೆ ಮರಳುವ ಅವಕಾಶ ಮಂಕಾಯಿತು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಜಗ್ಗರ್ನಾಟ್ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ 'A Maverick in Politics' ಎಂಬ ತಮ್ಮ ನೂತನ ಕೃತಿಯಲ್ಲಿ ಮಣಿಶಂಕರ್ ಅಯ್ಯರ್ ಈ ಸಾಧ್ಯತೆಗಳನ್ನು ಮುಂದಿಟ್ಟಿದ್ದಾರೆ.
ತಮ್ಮ ನೂತನ ಕೃತಿಯಲ್ಲಿ ರಾಜಕೀಯದಲ್ಲಿನ ತಮ್ಮ ಆರಂಭಿಕ ದಿನಗಳು, ನರಸಿಂಹ ರಾವ್ ಅವಧಿಯ ಸರಕಾರ, ಯುಪಿಎ-1 ಸರಕಾರದಲ್ಲಿನ ತಮ್ಮ ಸಚಿವಗಿರಿ, ರಾಜ್ಯಸಭಾ ಸದಸ್ಯತ್ವ ಅವಧಿ ಹಾಗೂ ತಮ್ಮ ರಾಜಕೀಯ ಜೀವನದಲ್ಲಿನ ಕುಸಿತ, ಕಳೆಗುಂದುವಿಕೆಯನ್ನು ಮಣಿಶಂಕರ್ ಅಯ್ಯರ್ ಮೆಲುಕು ಹಾಕಿದ್ದಾರೆ.