ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪಕರ ಜೀವನ ಚರಿತ್ರೆ ಕುರಿತ ಸಿನೆಮಾ ಪ್ರಸಾರಕ್ಕೆ 'ಪ್ರಸಾರ ಭಾರತಿ' ನಿರಾಕರಣೆ

PC: x.com/dcwwiki
ಮುಂಬೈ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(AMU)ದ ಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ (1817-1898) ಅವರ ಜೀವನ ಚರಿತ್ರೆಯನ್ನು ಕುರಿತ ಸಿನೆಮಾವನ್ನು ದೂರದರ್ಶನವು ಪ್ರಸಾರ ಭಾರತಿ OTT ಯಲ್ಲಿ ಅದನ್ನು ಪ್ರಸಾರ ಮಾಡಲು ನಿರಾಕರಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಸೈಯದ್ ಅಹ್ಮದ್ ಖಾನ್ ಅವರ ಕುರಿತ 'ಸರ್ ಸೈಯದ್ ಅಹ್ಮದ್ ಖಾನ್: ದಿ ಮೆಸ್ಸಿಹ್' ಎಂಬ ಉರ್ದು ಸಿನೆಮಾವು ಈಗಾಗಲೇ OTT ವೇದಿಕೆಯ ಮುಖಾಂತರ ಅಂತರರಾಷ್ಟ್ರೀಯವಾಗಿ ಬಿಡುಗಡೆಯಾಗಿದೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕುಲಪತಿ ನೈಮಾ ಖಾತೂನ್ ಅವರು ವಿವಿಯ ಆವರಣದಲ್ಲಿ ಸಿನೆಮಾವನ್ನು ಬಿಡುಗಡೆ ಮಾಡಿದ್ದರು.
“ಆದಾಯ ಹಂಚಿಕೆಯಡಿಯಲ್ಲಿ ಸರ್ ಸೈಯದ್ ಅಹ್ಮದ್ ಖಾನ್ ಅವರ ಜೀವನವನ್ನು ಆಧರಿಸಿದ ಕಾರ್ಯಕ್ರಮವನ್ನು ಪ್ರಸಾರ ಭಾರತಿಯ OTT ಮುಖಾಂತರ ಪ್ರಸಾರ ಮಾಡುವ ಅಥವಾ ಸ್ಟ್ರೀಮಿಂಗ್ ಮಾಡುವ ನಿಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ನಿಮಗೆ ತಿಳಿಸಲು ನನಗೆ ನಿರ್ದೇಶಸಿಲಾಗಿದೆ”, ಎಂದು ಪ್ರಸಾರ ಭಾರತಿಯ ಕಾರ್ಯಕ್ರಮ ಕಾರ್ಯನಿರ್ವಾಹಕರು ಮುಂಬೈ ಮೂಲದ ನಿರ್ಮಾಣ ಸಂಸ್ಥೆ ಡಾರ್ಕ್ ಹಾರ್ಸ್ ಪ್ರೊಡಕ್ಷನ್ಸ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
“ದೂರದರ್ಶನಕ್ಕಾಗಿ ನಾನು ನಿರ್ಮಿಸಿದ ಧಾರವಾಹಿಯು ಡಿಡಿಯ ಇತಿಹಾಸದಲ್ಲಿ ಅತ್ಯಂತ ಧೀರ್ಘ ಕಾಲದ ವರೆಗೆ ನಡೆಯಿತು. ಸಮಾಜ ಸುಧಾರಕ, ಶಿಕ್ಷಣ ತಜ್ಞ ಸರ್ ಸೈಯದ್ ಅವರ ಜೀವನ ಚರಿತ್ರೆಯು ಸಾರ್ವಜನಿಕ ಪ್ರಸಾರದ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಮಾಡಲು ಅರ್ಹತೆ ಪಡೆಯಲು ವಿಫಲವಾಗಿದೆ ಎಂಬುದು ಆಘಾತಕಾರಿ. ಡಿಡಿ ತನ್ನ ರಾಜಕೀಯ ಗುರುಗಳನ್ನು ಮೆಚ್ಚಿಸಲು ನನ್ನ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ತೋರುತ್ತದೆ", ಎಂದು ಸಿನೆಮಾದ ನಿರ್ಮಾಪಕ ಮತ್ತು ಜೀವನ ಚರಿತ್ರೆಯ ಪ್ರಮುಖ ಭೂಮಿಖೆ ನಿಭಾಯಿಸಿರುವ ನಟ ಶೋಯೆಬ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ ಸೈಯದ್ ಅವರ ಜೀವನ ಚರಿತ್ರೆ ಹಯಾತ್-ಇ-ಜಾವೇದ್ ಅವರನ್ನು ಆಧರಿಸಿ, ಈ ಜೀವನ ಚರಿತ್ರೆಯನ್ನು ಚಿತ್ರೀಕರಿಸಲಾಗಿದೆ. 1920 ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (AMU)ವಾಗಿ ಮಾರ್ಪಟ್ಟ ಮುಹಮ್ಮದನ್ ಆಂಗ್ಲೋ ಓರಿಯಂಟಲ್ (MAO) ಕಾಲೇಜನ್ನು ಸ್ಥಾಪಿಸಲು ಸರ್ ಸೈಯದ್ ಅವರ ಹೋರಾಟದ ಹಾದಿ ಮತ್ತು ಮುಸ್ಲಿಮರಲ್ಲಿ ವೈಜ್ಞಾನಿಕ ಚಿಂತನೆಯನ್ನು ತುಂಬಲು ಅವರ ಪ್ರಯತ್ನಗಳು ಸಿನೆಮಾದಲ್ಲಿ ಚಿತ್ರಿತವಾಗಿದೆ. 2020 ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯನ್ನುದ್ದೇಶಿಸಿ ಆನ್ಲೈನ್ ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, AMU ಕ್ಯಾಂಪಸ್ ಅನ್ನು "ಮಿನಿ-ಇಂಡಿಯಾ" ಎಂದು ಕರೆದಿದ್ದರು.