ಪಡಿತರ ಧಾನ್ಯಗಳ ಚೀಲಗಳ ಮೇಲೆ ಪ್ರಧಾನಿ ಮೋದಿ ಲಾಂಛನಗಳಿಗೆ ಕೋಟ್ಯಂತರ ರೂ. ವೆಚ್ಚ; ವರದಿ
Photo credit: thehindu.com
ಹೊಸದಿಲ್ಲಿ: ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಆಹಾರ ಧಾನ್ಯಗಳನ್ನು ವಿತರಿಸಲು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ಲಾಂಛನಗಳನ್ನು ಲ್ಯಾಮಿನೇಟ್ ಮಾಡಲಾದ ಚೀಲಗಳಿಗಾಗಿ ಟೆಂಡರ್ಗಳನ್ನು ಕರೆಯುವಂತೆ ಭಾರತೀಯ ಆಹಾರ ನಿಗಮ(ಎಫ್ಸಿಐ)ವು ತನ್ನ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಿದೆ. ಈ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಈ ಸೂಚನೆ ಹೊರಬಿದ್ದಿದೆ ಎಂದು thehindu.com ವರದಿ ಮಾಡಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ)ಯಡಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಯೋಜನೆಯ ಸುಮಾರು 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ.
ಆರ್ಟಿಐ ಕಾರ್ಯಕರ್ತ ಅಜಯ ಬೋಸ್ ಅವರು ಕಾಯ್ದೆಯಡಿ ಪಡೆದುಕೊಂಡಿರುವ ಉತ್ತರದಂತೆ ರಾಜಸ್ಥಾನವೊಂದೇ 13.29 ಕೋಟಿ ರೂ.ವೆಚ್ಚದಲ್ಲಿ ಸಿಂಥೆಟಿಕ್ ಬ್ಯಾಗ್ ಗಳ ಪೂರೈಕೆಗಾಗಿ ಐದು ಕಂಪನಿಗಳಿಗೆ ಟೆಂಡರ್ ಗಳನ್ನು ನೀಡಿದೆ. ಪ್ರತಿ ಬ್ಯಾಗ್ ಗೆ 12.375 ರೂ.ದರದಲ್ಲಿ 1.07 ಕೋಟೊ ಸಿಂಥೆಟಿಕ್ ಚೀಲಗಳನ್ನು ಖರೀದಿಸಲು ಅದು ಉದ್ದೇಶಿಸಿದೆ. ನಾಗಾಲ್ಯಾಂಡ್ ಒಂದು ಕಂಪನಿಗೆ ಮಾತ್ರ ಪ್ರತಿ ಚೀಲಕ್ಕೆ 9.30 ರೂ.ದರದಲ್ಲಿ ಬ್ಯಾಗ್ಗಳ ಪೂರೈಕೆಗೆ ಟೆಂಡರ್ ನೀಡಿದೆ.
2024ರಲ್ಲಿ ‘ಚುನಾವಣೆಗಳಿಗೆ ಮುನ್ನ‘ ಇಂತಹ ಬ್ರ್ಯಾಂಡಿಂಗ್ ಆರಂಭಗೊಂಡಿದೆ ಎಂದು ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಈ ನಡುವೆ ತಮಿಳುನಾಡು 1.14 ಕೋಟಿ ಚೀಲಗಳಿಗಾಗಿ ಟೆಂಡರ್ ಕರೆದಿದ್ದರೆ, ಮಹಾರಾಷ್ಟ್ರವಿನ್ನೂ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.
ಈ ತಿಂಗಳ ಆರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ಪಿಎಂಜಿಕೆಎವೈ ಅಡಿ ಪಡಿತರ ಅಂಗಡಿಗಳಲ್ಲಿ ಮೋದಿಯವರ ಕಟೌಟ್ಗಳನ್ನೊಳಗೊಂಡ ಸೆಲ್ಫೀ ಪಾಯಿಂಟ್ಗಳನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರದ ನಿರ್ದೇಶನವನ್ನು ತಿರಸ್ಕರಿಸಿದ್ದರು.
ಇದಕ್ಕೂ ಮುನ್ನ ಪಡಿತರ ವಿತರಣೆಗೆ ಬಳಸುವ ಚೀಲಗಳ ಮೇಲೆ ಮೋದಿಯವರ ಚಿತ್ರವನ್ನು ಮುದ್ರಿಸಲು ನಿರಾಕರಿಸಿದ್ದಕ್ಕಾಗಿ ಮೋದಿ ಸರಕಾರವು ಪಶ್ಚಿಮ ಬಂಗಾಳ ಸರಕಾರಕ್ಕೆ ಹಣಕಾಸು ತಡೆಹಿಡಿದಿತ್ತು.