ಒಡಿಶಾ | ಗರ್ಭಿಣಿಯಾಗಿದ್ದ ಸರ್ಕಾರಿ ಉದ್ಯೋಗಿಗೆ ರಜೆ ನಿರಾಕರಣೆಯಿಂದ ಗರ್ಭಪಾತ : ಆರೋಪ

PC ; freepik.com
ಕೇಂದ್ರಪಾರ : ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ರಜೆ ನಿರಾಕರಿಸಿದ್ದರಿಂದ, ತೀವ್ರ ಪ್ರಸವ ವೇದನೆಯುಂಟಾಗಿ ನನ್ನ ಮಗು ಗರ್ಭದಲ್ಲೇ ಮೃತಪಟ್ಟಿದೆ ಎಂದು 26 ವರ್ಷದ ಒಡಿಶಾ ಸರಕಾರಿ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ.
ಈ ಘಟನೆ ಅಕ್ಟೋಬರ್ 25ರಂದು ನಡೆದಿದ್ದರೂ, ಸಂತ್ರಸ್ತ ಮಹಿಳೆ ಬರ್ಷಾ ಪ್ರಿಯದರ್ಶಿನಿ ಎಂಬುವವರು ಈ ವಿಷಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ನಂತರ ಬೆಳಕಿಗೆ ಬಂದಿದೆ.
ಕೇಂದ್ರಪಾರ ಜಿಲ್ಲೆಯ ದೆರಾಬಿಶ್ ಬ್ಲಾಕ್ ನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿಯಾದ ಬರ್ಷಾ, ಏಳು ತಿಂಗಳ ಗರ್ಭಿಣಿಯಾಗಿದ್ದ ನಾನು, ಕೆಲಸದ ವೇಳೆ ತೀವ್ರ ಪ್ರಸವ ವೇದನೆಗೆ ತುತ್ತಾಗಿದ್ದೆ ಎಂದು ಹೇಳಿದ್ದಾರೆ.
ಮಕ್ಕಳ ಕಲ್ಯಾಣ ಯೋಜನಾಧಿಕಾರಿ ಸ್ನೇಹಲತಾ ಹಾಗೂ ಇನ್ನಿತರ ಅಧಿಕಾರಿಗಳಿಗೆ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದರೂ, ಅವರು ನನ್ನ ಮನವಿಗಳನ್ನು ನಿರ್ಲಕ್ಷಿಸಿದರು ಎಂದು ಬರ್ಷಾ ಆರೋಪಿಸಿದ್ದಾರೆ. ಸ್ನೇಹಲತಾ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದೂ ಅವರು ಆಪಾದಿಸಿದ್ದಾರೆ.
ನಂತರ, ಬರ್ಷಾ ಸಂಬಂಧಿಕರು ಆಕೆಯನ್ನು ಕೇಂದ್ರಪಾರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಿದಾಗ, ಮಗುವು ಗರ್ಭದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.
ಈ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಪ್ರವತಿ ಪರೀದಾ, ಈ ಘಟನೆಯ ಕುರಿತು ಕೇಂದ್ರಪಾರ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದು, ಈ ಕುರಿತು ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ತಮ್ಮ ವಿರುದ್ಧದ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಕಲ್ಯಾಣ ಯೋಜನಾಧಿಕಾರಿ ಸ್ನೇಹಲತಾ ಸಾಹೂ, ಬರ್ಷಾ ಅನುಭವಿಸುತ್ತಿದ್ದ ನೋವಿನ ಬಗ್ಗೆ ನನಗೆ ತಿಳದಿರಲಿಲ್ಲ ಎಂದು ಹೇಳಿದ್ದಾರೆ.
“ಈ ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗುವುದು. ನಂತರ ನಮ್ಮ ವರದಿಯನ್ನು ಸಲ್ಲಿಸುತ್ತೇವೆ” ಎಂದು ಕೇಂದ್ರಾಪಾರದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮನೋರಮಾ ಸ್ವೈನ್ ತಿಳಿಸಿದ್ದಾರೆ.