ಕೇರಳದ ಮೂರು ಮಸೂದೆಗಳಿಗೆ ಒಪ್ಪಿಗೆ ತಡೆಹಿಡಿದಿರುವ ರಾಷ್ಟ್ರಪತಿ
ದ್ರೌಪದಿ ಮುರ್ಮು | Photo: ANI
ತಿರುವನಂತಪುರ: ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ಕೆಳಗಿಳಿಸಲು ಉದ್ದೇಶಿಸಿರುವ ಮಸೂದೆ ಸೇರಿದಂತೆ ರಾಜ್ಯ ಶಾಸಕಾಂಗವು ಅಂಗೀಕರಿಸಿರುವ ಮೂರು ವಿವಿ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆಯನ್ನು ತಡೆಹಿಡಿದಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ರಾಜ್ಯ ವಿಧಾನಸಭೆಯು ಅಂಗೀಕರಿಸಿರುವ ಕೇರಳ ಲೋಕಾಯುಕ್ತ ಮಸೂದೆಯನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ ಎಂದು ರಾಜಭವನವು ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯಪಾಲರು ಈ ಮಸೂದೆಗಳನ್ನು ರಾಷ್ಟ್ರಪತಿ ಭವನದ ಪರಿಗಣನೆಗಾಗಿ ಸಲ್ಲಿಸಿದ್ದರು. ಈ ಪೈಕಿ ಕೇರಳ ವಿವಿ ಕಾನೂನುಗಳು (ತಿದ್ದುಪಡಿ ಸಂಖ್ಯೆ 2) ಮಸೂದೆ 2022, ವಿವಿ ಕಾನೂನು ತಿದ್ದುಪಡಿ ಮಸೂದೆ, 2022 ಹಾಗೂ ವಿವಿ ಕಾನೂನು ತಿದ್ದುಪಡಿ ಮಸೂದೆ, 2021ಕ್ಕೆ ರಾಷ್ಟ್ರಪತಿಗಳು ಒಪ್ಪಿಗೆಯನ್ನು ತಡೆಹಿಡಿದಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.
ನವಂಬರ್ 2023ರಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಒಟ್ಟು ಏಳು ಮಸೂದೆಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ ಕೇರಳ ಲೋಕಾಯುಕ್ತ ಮಸೂದೆ 2022ಕ್ಕೆ ಮಾತ್ರ ಒಪ್ಪಿಗೆಯನ್ನು ನೀಡಲಾಗಿದೆ. ಇತರ ಮೂರು ಮಸೂದೆಗಳ ಕುರಿತು ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ ಎಂದೂ ಹೇಳಿಕೆಯು ತಿಳಿಸಿದೆ.