ದೇಶದ ಅತಿದೊಡ್ಡ ಕೇಬಲ್ ಸೇತುವೆ ʼಸುದರ್ಶನ್ ಸೇತುʼ ಉದ್ಘಾಟಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಗುಜರಾತ್ ನ ದ್ವಾರಕದಲ್ಲಿ ನಿರ್ಮಿಸಿರುವ ದೇಶದ ಅತಿದೊಡ್ಡ ಕೇಬಲ್ ಸೇತುವೆ ʼಸುದರ್ಶನ್ ಸೇತು; ವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಕೇಬಲ್ ಸೇತುವೆ ಓಖಾ ಮತ್ತು ಬೆಟ್ ದ್ವಾರಕವನ್ನು ಸಂಪರ್ಕಿಸಲಿದ್ದು, ಸುಮಾರು 979 ಕೋಟಿ ರೂಪಾಯಿ ವೆಚ್ಚದದಲ್ಲಿ ಇದನ್ನು ನಿರ್ಮಿಸಲಾಗಿದೆ. 2.3 ಕಿಲೋಮೀಟರ್ ಉದ್ದದ ಈ ಸೇತುವೆಗೆ ಪ್ರಧಾನಿ ನರೇಂದ್ರ ಮೋದಿ 2017ರ ಅಕ್ಟೋಬರ್ ನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಇದು ಹಳೆಯ ಮತ್ತು ಹೊಸ ದ್ವಾರಕ ನಡುವಿನ ಸಂಪರ್ಕಸೇತುವಾಗಿದೆ.
ನಾಲ್ಕು ಲೇನ್‍ಗಳನ್ನು ಹೊಂದಿರುವ 27.20 ಮೀಟರ್ ಅಗಲದ ಸೇತುವೆ 2.5 ಮೀಟರ್ ಅಗಲದ ಫೂಟ್‍ಪಾತ್‍ಗಳನ್ನು ಎರಡೂ ಬದಿಯಲ್ಲಿ ಹೊಂದಿದೆ. ಸುದರ್ಶನಸೇತು ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಇದರ ಪಾದಚಾರಿ ರಸ್ತೆಗಳನ್ನು ಭಗವದ್ಗೀತೆಯ ಶ್ಲೋಕಗಳು ಹಾಗೂ ಎರಡೂ ಬದಿಯಲ್ಲಿ ಶ್ರೀಕೃಷ್ಣನ ಚಿತ್ರಗಳಿಂದ ಶೃಂಗರಿಸಲಾಗಿದೆ.
ಸಿಗ್ನೇಚರ್ ಬ್ರಿಡ್ಜ್ ಹೆಸರಿನ ಇದನ್ನು ಸುದರ್ಶನ ಸೇತು ಎಂದು ಮರುನಾಮಕರಣ ಮಾಡಲಾಗಿದೆ. ಬೆಟ್‍ದ್ವಾರಕ ಓಖಾ ಬಂದರು ಬಳಿಯ ಪುಟ್ಟ ದ್ವೀಪವಾಗಿದ್ದು, ದ್ವಾರಕಾಧೀಶ ದೇಗುಲ ಹೊಂದಿರುವ ದ್ವಾರಕ ಪಟ್ಟಣದಿಂದ 30 ಕಿಲೋಮೀಟರ್ ದೂರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ದ್ವಾರಕಾಧೀಶ ದೇಗುಲದಲ್ಲಿ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದರು.