ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದಕ್ಕೆ ಕಾರಣ ನೀಡಿದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ | PC : PTI
ಹೊಸದಿಲ್ಲಿ: ದೇಶಾದ್ಯಂತ ಪಕ್ಷಕ್ಕಾಗಿ ಪ್ರಚಾರ ಮಾಡಲು ತಾನು ಬಯಸುವುದರಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ನಾನು ಮತ್ತು ರಾಹುಲ್ ಗಾಂಧಿ ಇಬ್ಬರೂ ಚುನಾವಣೆ ಸ್ಪರ್ಧಿಸಿದರೆ ಅದು ಬಿಜೆಪಿಗೆ ಸಹಕಾರಿಯಾಗಬಹುದು ಎಂದೂ ಅವರು ಹೇಳಿಕೊಂಡರು.
“ಗಾಂಧಿ ಕುಟುಂಬಕ್ಕೂ ರಾಯ್ಬರೇಲಿಗೂ ಹಳೆಯ ನಂಟು. ನಾವು ಇಲ್ಲಿಗೆ ಬಂದು ಎಲ್ಲರೊಡನೆ ಬೆರೆತು ಮಾತನಾಡಬೇಕೆಂದು ಜನರು ಬಯಸುತ್ತಾರೆ. ರಿಮೋಟ್ ಕಂಟ್ರೋಲ್ ಮೂಲಕ ನಮಗೆ ಇಲ್ಲಿ ಚುನಾವಣೆ ಗೆಲ್ಲಲಾಗದು,” ಎಂದು ಪ್ರಿಯಾಂಕ ಗಾಂಧಿ ಹೇಳಿದರು.
“ನಾವಿಬ್ಬರೂ ಸ್ಪರ್ಧಿಸಿದ್ದರೆ, ಇಬ್ಬರೂ ತಮ್ಮ ಕ್ಷೇತ್ರದಲ್ಲೇ 15 ದಿನ ಕಳೆಯಬೇಕಾಗುತ್ತದೆ. ಹಾಗಿರುವಾಗ ಒಬ್ಬರು ಸ್ಪರ್ಧಿಸಿ ಇನ್ನೊಬ್ಬರು ದೇಶಾದ್ಯಂತ ಪ್ರಚಾರ ಕೈಗೊಳ್ಳುವುದು ಸೂಕ್ತ ಎಂದು ನಿರ್ಧರಿಸಿದೆವು,” ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅಮೇಥಿಯಲ್ಲಿ ಸ್ಪರ್ಧಿಸದೇ ಇರುವ ಬಗ್ಗೆ ಬಿಜೆಪಿ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ, ಕಾಂಗ್ರೆಸ್ ಪಕ್ಷ ಅಮೇಥಿ ಮತ್ತು ರಾಯ್ಬರೇಲಿಯನ್ನು ಬಿಟ್ಟುಬಿಡುವುದಿಲ್ಲ, ಎರಡೂ ಕ್ಷೇತ್ರಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದರು.
“ಮೋದಿ ಏಕೆ ವಡೋದರಾದಿಂದ ಸ್ಪರ್ಧಿಸುತ್ತಿಲ್ಲ, ಅವರಿಗೆ ಭಯವೇ, ಅವರು ಗುಜರಾತ್ನಿಂದ ಓಡಿ ಹೋದರೇ?” ಎಂದು ಪ್ರಿಯಾಂಕ ಪ್ರಶ್ನಿಸಿದರು.