ಪಂಜಾಬ್ ಬಂದ್ : ರೈತರಿಂದ ವಿವಿಧೆಡೆ ರಸ್ತೆ ತಡೆ, ಸಂಚಾರ ಅಸ್ತವ್ಯಸ್ತ
Photo | PTI
ಚಂಡೀಗಢ: ಪಂಜಾಬ್ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆ ಸೋಮವಾರ ರಾಜ್ಯಾದ್ಯಂತ ಹಲವೆಡೆ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಸಂಚಾರದ ದಟ್ಟಣೆಗೆ ಕಾರಣವಾಗಿದೆ.
ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳದಿರುವುದನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬಂದ್ ಗೆ ಕರೆ ನೀಡಿದೆ.
ರೈತರ ‘ರೈಲ್ ರೋಕೋ ಆಂದೋಲನದಿಂದ ರೈಲು ಸಂಚಾರದ ಮೇಲೆ ಭಾರೀ ಪರಿಣಾಮ ಬೀರಿದ್ದು, 163 ರೈಲುಗಳ ಸಂಚಾರ ರದ್ದತಿಗೆ ಕಾರಣವಾಗಿದೆ. ಧರೇರಿ ಜತ್ತನ್ ಟೋಲ್ ಪ್ಲಾಝಾದಲ್ಲಿ ರೈತರು ಧರಣಿ ನಡೆಸಿದ್ದರಿಂದ ಪಟಿಯಾಲ ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಅಮೃತಸರದ ಗೋಲ್ಡನ್ ಗೇಟ್ ನಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಬಟಿಂಡಾದ ರಾಂಪುರ ಫುಲ್ ನಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಮೊಹಾಲಿಯ ಐಐಎಸ್ ಇಆರ್ ಚೌಕ್ ನಲ್ಲಿ ಏರ್ ಪೋರ್ಟ್ ರಸ್ತೆ, ಕುರಾಲಿ ಟೋಲ್ ಪ್ಲಾಝಾ, ಲಾಲ್ರು ಬಳಿಯ ಅಂಬಾಲಾ ದಿಲ್ಲಿ ಹೆದ್ದಾರಿ ಟೋಲ್ ಪ್ಲಾಝಾ ಮತ್ತು ಖರಾರ್-ಮೊರಿಂಡಾ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ.
ಸಂಪೂರ್ಣ ಬಂದ್ ಇದ್ದರೂ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ರವಿವಾರ ಹೇಳಿದ್ದರು.