ವಾಹನ ಚಲಾಯಿಸಿ ಅಪ್ರಾಪ್ತರು ಎಸಗುವ ಅಪರಾಧಗಳಿಗೆ ವಾಹನ ಮಾಲಕರಿಗೆ ದಂಡ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಕೇರಳ ಹೈಕೋರ್ಟ್ ಸಮ್ಮತಿ
ಕೇರಳ ಹೈಕೋರ್ಟ್ | PC : PTI
ಕೇರಳ: ಅಪ್ರಾಪ್ತ ವಯಸ್ಕರು ಅಥವಾ ಬಾಲಾಪರಾಧಿಗಳು ಅಪರಾಧ ಎಸಗಿದಾಗ ರಕ್ಷಕರು ಅಥವಾ ವಾಹನ ಮಾಲಕರಿಗೆ ದಂಡ ವಿಧಿಸುವ ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 199Aಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಯನ್ನು ಪರಿಶೀಲಿಸಲು ಕೇರಳ ಹೈಕೋರ್ಟ್ ಸಮ್ಮತಿಸಿದೆ.
ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಈ ಕುರಿತು ಅರ್ಜಿ ವಿಚಾರಣೆಗೆ ಸಮ್ಮತಿಸಿದ್ದು, ಡಿಸೆಂಬರ್ 10ರಂದು ವಿಚಾರಣೆಗೆ ಮೊದಲು ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ.
ಕೋಝಿಕ್ಕೋಡ್ನ 30 ವರ್ಷದ ಮಹಿಳೆಯೋರ್ವರು ಈ ಕುರಿತು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರೆ ಮಹಿಳೆಯ ಸ್ಕೂಟರ್ ನ್ನು ನೆರೆ ಮನೆಯ ಅಪ್ರಾಪ್ತ ಬಾಲಕನೋರ್ವ ಚಲಾಯಿಸಿಕೊಂಡು ಹೋಗಿದ್ದು, ಈ ಬಗ್ಗೆ ಅವರ ವಿರುದ್ಧ ಮೋಟಾರು ವಾಹನ ಕಾಯ್ದೆ-1988ರ(ಎಂವಿ ಕಾಯಿದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸೆಕ್ಷನ್ 199A ಪ್ರಕಾರ, ಬಾಲಾಪರಾಧಿಯ ಅಪರಾಧಕ್ಕೆ ಪೋಷಕರಿಂದ ಸಹಾಯ ಅಥವಾ ಪ್ರಚೋದನೆ ಇಲ್ಲದಿದ್ದರೂ ಪೋಷಕರು ಶಿಕ್ಷಾರ್ಹರಾಗಿದ್ದಾರೆ. ಒಂದು ಅಪರಾಧವನ್ನು ಬಾಲಾಪರಾಧಿ ಎಸಗಿದ್ದರೆ, ಅಂತಹ ಬಾಲಾಪರಾಧಿಯ ರಕ್ಷಕ ಅಥವಾ ಮೋಟಾರು ವಾಹನದ ಮಾಲಕರು ಶಿಕ್ಷೆಗೆ ಒಳಪಡುತ್ತಾರೆ.