ಸಾವರ್ಕರ್ ಮಾನಹಾನಿ ಆರೋಪ: ರಾಹುಲ್ ಗಾಂಧಿಗೆ ಪುಣೆ ನ್ಯಾಯಾಲಯದಿಂದ ಸಮನ್ಸ್
ರಾಹುಲ್ ಗಾಂಧಿ
ಪುಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ದಾಖಲಿಸಿರುವ ಮಾನಹಾನಿ ಪ್ರಕರಣದ ಸಂಬಂಧ ಅಕ್ಟೋಬರ್ 23ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆಯ ವಿಶೇಷ ನ್ಯಾಯಾಲಯವೊಂದು ಸಮನ್ಸ್ ಜಾರಿಗೊಳಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿ.ಡಿ.ಸಾವರ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕೆ ಈ ಮಾನಹಾನಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಈ ಸಂಬಂಧ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಕಳೆದ ತಿಂಗಳು ಈ ಪ್ರಕರಣವು ಪ್ರಥಮ ದರ್ಜೆಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದ ಜಂಟಿ ಸಿವಿಲ್ ನ್ಯಾಯಾಧೀಶ ಹಾಗೂ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅಮೋಲ್ ಶಿಂಧೆ ಅವರು ರಾಹುಲ್ ಗಾಂಧಿಗೆ ಸಮನ್ಸ್ ಜಾರಿಗೊಳಿಸಿದ್ದು, ಅವರ ವಿರುದ್ಧ ದಾಖಲಾಗಿರುವ ಭಾರತೀಯ ದಂಡ ಸಂಹಿತೆಯ ಶಿಕ್ಷಾರ್ಹ ಸೆಕ್ಷನ್ ಆದ 500 (ಮಾನಹಾನಿ) ಸಂಬಂಧ ಅವರ ಖುದ್ದು ಹಾಜರಿ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಅಕ್ಟೋಬರ್ 23ರಂದು ನ್ಯಾಯಾಲಯದೆದುರು ಖುದ್ದಾಗಿ ಹಾಜರಾಗಬೇಕಿದೆ ಎಂದು ಸತ್ಯಕಿ ಸಾವರ್ಕರ್ ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಸಂಗ್ರಾಮ್ ಕೊಲ್ಹಾತ್ಕರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಾರ್ಚ್ 2023ರಲ್ಲಿ ಲಂಡನ್ ಗೆ ತೆರಳಿದ್ದ ರಾಹುಲ್ ಗಾಂಧಿ, ವಿ.ಡಿ.ಸಾವರ್ಕರ್ ಅವರು ತಮ್ಮ ಪುಸ್ತಕವೊಂದರಲ್ಲಿ ನಾನು ಹಾಗೂ ನನ್ನ ಇನ್ನಿತರ ಐದಾರು ಮಂದಿ ಸ್ನೇಹಿತರು ಒಮ್ಮೆ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದೆವು ಹಾಗೂ ನಾನು ಅದರಿಂದ ಸಂತಸಗೊಂಡಿದ್ದೆ ಎಂದು ಬರೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಸತ್ಯಕಿ ಸಾವರ್ಕರ್ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.