ಪುಣೆ: ಚಾಕು ತೋರಿಸಿ ಬೆದರಿಸಿ ಯುವತಿಯ ಅತ್ಯಾಚಾರ, ದರೋಡೆ
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಸೋಮವಾರ 19 ವರ್ಷದ ಯುವತಿಯೊಬ್ಬಳು ತನ್ನ ಸಂಬಂಧಿಯ ಜತೆಗಿದ್ದ ವೇಳೆ ಇಬ್ಬರು ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿ ದರೋಡೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಅತ್ಯಾಚಾರ ಎಸಗುವ ಮುನ್ನ ಇಬ್ಬರು ಆರೋಪಿಗಳು, ಯುವತಿ ಹಾಗೂ ಆಕೆಯ ಸಂಬಂಧಿಯನ್ನು ಅಶ್ಲೀಲ ಚಟುವಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದು, ಘಟನೆಯನ್ನು ಬಲವಂತವಾಗಿ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪುಣೆಯ ಶಿರೂರು ತಾಲೂಕಿನಲ್ಲಿ ಶನಿವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ಸಂಬಂಧಿಕರು ಪರಸ್ಪರ ಮಾತನಾಡುತ್ತಿದ್ದುದನ್ನು ಗಮನಿಸಿದ ಇಬ್ಬರು ದಾಳಿ ಮಾಡಿದರು ಎಂದು ಪೊಲೀಸರು ವಿವರಿಸಿದ್ದಾರೆ.
ಅತ್ಯಾಚಾರ ಎಸಗಿದ ಬಳಿಕ ಮೂಗುತಿ ಮತ್ತು ಪೆಂಡೆಂಟ್ ಸೇರಿದಂತೆ ಯುವತಿಯ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. "ಸುಮಾರು 25 ವರ್ಷ ಆಸುಪಾಸಿನ ಇಬ್ಬರು ಮೋಟರ್ ಬೈಕ್‌ನಲ್ಲಿ ಬಂದು ಇಬ್ಬರನ್ನೂ ಚಾಕು ತೋರಿಸಿ ಬೆದರಿಸಿದ್ದಾರೆ. ಇಬ್ಬರೂ ಸಲುಗೆಯಿಂದ ಇರುವಂತೆ ಬಲವಂತಪಡಿಸಿ ಘಟನೆಯನ್ನು ಫೋನ್ ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಆರೋಪಿಗಳು ಸರದಿಯಂತೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೂಗುತಿ ಮತ್ತು ಚಿನ್ನದ ಪೆಂಡೆಂಟ್ ದೋಚಿ ಪರಾರಿಯಾಗಿದ್ದಾರೆ" ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಮಹಾದೇವ ವಾಘ್ಮೋಡೆ ಹೇಳಿದ್ದಾರೆ.
ಘಟನೆಯಿಂದ ಆಘಾತಗೊಂಡಿರುವ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.