ಪಂಜಾಬ್ ಸಿಎಂಗೆ ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂನ್ನಿಂದ ಕೊಲೆ ಬೆದರಿಕೆ
Photo: Twitter@NDTV
ಚಂಡಿಗಢ, ಜ. 16: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂನ್ನ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಹೇಳಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಪನ್ನೂನ್ ಭಾರತದ ವಿರುದ್ಧ ಹಲವು ಕೊಲೆ ಬೆದರಿಕೆಗಳನ್ನು ಒಡ್ಡಿದ್ದಾನೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಕಾನೂನು ಬಾಹಿರ ಸಂಘಟನೆ ಎಂದು ಭಾರತದಲ್ಲಿ ನಿಷೇಧಕ್ಕೆ ಒಳಗಾದ ಖಾಲಿಸ್ತಾನ್ ಪರ ಗುಂಪು ಸಿಕ್ಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ)ನ ಸ್ಥಾಪಕನಾಗಿರುವ ಗುರುಪತ್ವಂತ್ ಸಿಂಗ್ ಪನ್ನೂನ್ನನ್ನು ಕೇಂದ್ರ ಸರಕಾರ ‘ಭಯೋತ್ಪಾದಕ’ ಎಂದು ಪಟ್ಟಿ ಮಾಡಿದೆ.
ಸಂಘಟಿತರಾಗುವಂತೆ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ, ಪಂಜಾಬ್ ಮುಖ್ಯಮಂತ್ರಿ ಮೇಲೆ ಜನವರಿ 26ರಂದು ದಾಳಿ ನಡೆಸುವಂತೆ ಅಮೆರಿಕದಲ್ಲಿ ನೆಲೆಸಿರುವ ಅಮೆರಿಕ-ಕೆನಡಾ ಪ್ರಜೆ ಪನ್ನೂನ್ ಭೂಗತ ಪಾತಕಿಗಳಲ್ಲಿ ಆಗ್ರಹಿಸಿದ್ದಾನೆ ಎಂದು ‘ಇಂಡಿಯಾ ಟುಡೆ. ಇನ್’ ತನ್ನ ವರದಿಯಲ್ಲಿ ತಿಳಿಸಿದೆ.
ಭೂಗತ ಪಾತಕಿಗಳ ವಿರುದ್ಧ ಪಂಜಾಬ್ ಪೊಲೀಸರು ಶೂನ್ಯ ಸಹಿಷ್ಣುತೆ ಪ್ರದರ್ಶಿಸಲಿದ್ದಾರೆ ಹಾಗೂ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
2001 ಡಿಸೆಂಬರ್ 13ರಂದು ಸಂಸತ್ ಮೇಲೆ ದಾಳಿ ನಡೆದಿದ್ದು, ಅದೇ ದಿನ ಸಂಸತ್ ಮೇಲೆ ಮತ್ತೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಒಡ್ಡಿದ ವೀಡಿಯೊವನ್ನು ಪನ್ನೂನ್ ಕಳೆದ ವರ್ಷ ಬಿಡುಗಡೆ ಮಾಡಿದ್ದ.