ಜನವರಿ 4ರಂದು ಕಿಸಾನ್ ಮಹಾ ಪಂಚಾಯತಿಗೆ ಕರೆ ನೀಡಿದ ಪಂಜಾಬ್ ರೈತರು
ಉಪವಾಸ ಸತ್ಯಾಗ್ರಹದ ಮೇಲೆ ಯಾವುದೇ ಒತ್ತಡವಿಲ್ಲ ಎಂದ ದಲ್ಲೇವಾಲ್
PC : PTI
ಛತ್ತೀಸ್ಗಢ: ಕೇಂದ್ರ ಸರಕಾರದೊಂದಿಗೆ ಸಂಘರ್ಷದ ಹಾದಿ ಹಿಡಿದಿರುವ ರೈತರು, ಜನವರಿ 4ರಂದು ಕಿಸಾನ್ ಮಹಾ ಪಂಚಾಯತಿಗೆ ಕರೆ ನೀಡಿದ್ದಾರೆ.
ಇದಕ್ಕೂ ಮುನ್ನ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ ಸಂಘಟನೆಗಳು ಡಿಸೆಂಬರ್ 30ರಂದು ಪಂಜಾಬ್ ಬಂದ್ ಗೆ ಕರೆ ನೀಡಿವೆ.
ಕಳೆದ ಒಂದು ತಿಂಗಳಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರ ನಾಯಕ ಜಗ್ಜೀತ್ ಸಿಂಗ್ ದಲ್ಲೇವಾಲ್ ರನ್ನು ಆಸ್ಪತ್ರೆಗೆ ದಾಖಲಿಸದ ಪಂಜಾಬ್ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ವಾಗ್ದಾಳಿ ನಡೆಸಿದ ಬೆನ್ನಿಗೇ, ರೈತರು ಈ ಕ್ರಮಕ್ಕೆ ಮುಂದಾಗಿದ್ದಾರೆ.
70 ವರ್ಷದ ಜಗ್ಜೀತ್ ಸಿಂಗ್ ದಲ್ಲೇವಾಲ್ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಶನಿವಾರ 33ನೇ ದಿನಕ್ಕೆ ತಲುಪಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ನಾಯಕ ಕಾಕಾ ಸಿಂಗ್ ಕೋತ್ರಾ ಹೇಳಿದ್ದಾರೆ.
“ನಾವು ಜನವರಿ 4ರಂದು ಖನೌರಿಯಲ್ಲಿ ಬೃಹತ್ ಕಿಸಾನ್ ಮಹಾ ಪಂಚಾಯತಿಯನ್ನು ಹಮ್ಮಿಕೊಳ್ಳಲಿದ್ದು, ಇದರಲ್ಲಿ ವಿವಿಧ ರಾಜ್ಯಗಳ ರೈತರು ಪಾಲ್ಗೊಳ್ಳಲಿದ್ದಾರೆ” ಎಂದು ಖನೌರಿ ಪ್ರತಿಭಟನಾ ಸ್ಥಳದ ಬಳಿ ಕೋತ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶನಿವಾರ ಪಂಜಾಬ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇತರ ರೈತರು ದಲ್ಲೇವಾಲ್ ರನ್ನು ಆಸ್ಪತ್ರೆಗೆ ದಾಖಲಿಸಲು ಅವಕಾಶ ನೀಡದಿರುವ ಸಾಧ್ಯತೆ ಇದೆ ಎಂದೂ ಅಭಿಪ್ರಾಯ ಪಟ್ಟಿತು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಲ್ಲೇವಾಲ್, “ನಾನು ಉಪವಾಸ ಕುಳಿತಿದ್ದೇನೆ. ಸುಪ್ರೀಂ ಕೋರ್ಟ್ ನಲ್ಲಿ ಈ ವರದಿ ನೀಡಿದ್ಯಾರು ಹಾಗೂ ನನ್ನನ್ನು ಒತ್ತೆಯಾಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂಬ ಈ ತಪ್ಪು ಗ್ರಹಿಕೆಯನ್ನು ಹರಡಿದ್ಯಾರು? ಇಂತಹ ಮಾತುಗಳು ಎಲ್ಲಿಂದ ಬರುತ್ತಿವೆ?” ಎಂದು ತಮ್ಮ ವಿಡಿಯೊ ಸಂದೇಶದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
“ಸಾಲದ ಹೊರೆಯಿಂದ ದೇಶಾದ್ಯಂತ ಏಳು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರನ್ನು ರಕ್ಷಿಸುವುದು ಅನಿವಾರ್ಯವಾಗಿರುವುದರಿಂದ, ನಾನಿಲ್ಲಿ ಉಪವಾಸ ಕುಳಿತಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ” ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
ನಾನು ಸುಪ್ರೀಂ ಕೋರ್ಟ್ ಗೆ ಪತ್ರ ಬರೆದಿದ್ದು, ಬೆಳೆಗಳಿಗೆ ಶಾಸನಾತ್ಮಕ ಕನಿಷ್ಠ ಬೆಂಬಲ ಬೆಲೆ ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದೂ ಅವರು ತಮ್ಮ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಈ ನಡುವೆ, ಒಂದು ವೇಳೆ ಉಪವಾಸ ಸತ್ಯಾಗ್ರಹ ಮುಂದುವರಿಸಲು ಬಯಸಿದರೂ, ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಸಮ್ಮತಿಸುವಂತೆ ದಲ್ಲೇವಾಲ್ ಗೆ ಪಂಜಾಬ್ ಸರಕಾರದ ಅಧಿಕಾರಿಗಳ ಉನ್ನತ ಮಟ್ಟದ ತಂಡವು ಮತ್ತೊಮ್ಮೆ ಮನವಿ ಮಾಡಿದೆ.