ಎಲ್ಲಾ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪೆಟ್ರೋಲ್ ಬಂಕ್ಗಳಲ್ಲಿ ʼಮೋದಿ ಕಿ ಗ್ಯಾರಂಟಿʼ ಹೋರ್ಡಿಂಗ್ ಅಳವಡಿಸಲು ಸೂಚನೆ: ವರದಿ
Photo: timesofindia.indiatimes.com
ಹೊಸದಿಲ್ಲಿ: ಸರ್ಕಾರಿ ಒಡೆತನದ ಇಂಧನ ರಿಟೇಲರ್ಗಳು ಈಗ ಪೆಟ್ರೋಲ್ ಬಂಕ್ಗಳಲ್ಲಿರುವ ಸರ್ಕಾರಿ ಕಲ್ಯಾಣ ಯೋಜನೆಗಳ ಹೋರ್ಡಿಂಗ್ಗಳ ಸ್ಥಾನದಲ್ಲಿ” ಮೋದಿ ಸರ್ಕಾರ್ ಕಿ ಗ್ಯಾರಂಟಿ ಮತ್ಲಬ್ ಆಸಾನ್ ಜೀವನ್ ಕಿ ಗ್ಯಾರಂಟಿ” (ಮೋದಿ ಸರ್ಕಾರದ ಗ್ಯಾರಂಟಿಯ ಅರ್ಥವೆಂದರೆ ಸುಲಭ ಜೀವನದ ಗ್ಯಾರಂಟಿ) ಎಂದು ಬರೆಯಲಾಗಿರುವ ಹೊಸ ಹೋರ್ಡಿಂಗ್ಗಳನ್ನು ಇರಿಸುತ್ತಿದ್ದಾರೆ. ಈ ಹೋರ್ಡಿಂಗ್ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯ ಫಲಾನುಭವಿಯೊಬ್ಬರಿಗೆ ಎಲ್ಪಿಜಿ ಸಿಲಿಡರ್ ನೀಡುವ ಫೋಟೋ ಕೂಡ ಇದೆ.
ಬುಧವಾರ ಸಂಜೆಯೊಳಗೆ ಈ ಹೊಸ ಫ್ಲೆಕ್ಸ್ ಹೋರ್ಡಿಂಗ್ಗಳನ್ನು ಅಳವಡಿಸಲು “ಸಹಕರಿಸಬೇಕು” ಎಂದು ಎಲ್ಲಾ ಪೆಟ್ರೋಲ್ ಬಂಕ್ ಮ್ಯಾನೇಜರ್ಗಳಿಗೆ ಹೇಳಲಾಗಿದೆ. ತೈಲ ಕಂಪನಿಗಳು ನಿಯೋಜಿಸಲ್ಪಟ್ಟ ಹೋರ್ಡಿಂಗ್ ಅಳವಡಿಸುವವರು ಬಾರದೇ ಇದ್ದಲ್ಲಿ ಆಯಾ ಮೇಲಧಿಕಾರಿಗಳಿಗೆ ತಿಳಿಸುವಂತೆಯೂ ಮ್ಯಾನೇಜರ್ಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು timesofindia ವರದಿ ಮಾಡಿದೆ.
ಕೇಂದ್ರ ತೈಲ ಸಚಿವಾಲಯದ ಅನೌಪಚಾರಿಕ ಸೂಚನೆಯಂತೆ ಈ ಕ್ರಮಕೈಗೊಳ್ಳಲಾಗುತ್ತಿದೆ ಎನ್ನಲಾಗಿದ್ದು, ಇದರಿಂದಾಗಿ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂಗೆ ನೂರಾರು ಕೋಟಿ ರೂಪಾಯಿ ವೆಚ್ಚವಾಗಲಿದೆ. ದೇಶದಲ್ಲಿರುವ ಸುಮಾರು 88,000 ಪೆಟ್ರೋಲ್ ಬಂಕ್ಗಳಲ್ಲಿ ಶೇ 90ರಷ್ಟು ಬಂಕ್ಗಳು ಈ ಮೂರು ಕಂಪನಿಗಳ ಒಡೆತನದಲ್ಲಿದೆ.
ಆದರೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದಾಕ್ಷಣ ಇಂತಹ ಹೋರ್ಡಿಂಗ್ಗಳನ್ನು ತೆಗೆಯಬೇಕಾಗಬಹುದು.