ಭಾರತದ ವಿರುದ್ಧ ಕತರ್ ವಿವಾದಾತ್ಮಕ ಗೋಲು: ತನಿಖೆಗೆ ಕೋರಿದ AIFF

Image Credit: X/@IndianFootball
ಹೊಸದಿಲ್ಲಿ: ದೋಹದಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಮಹತ್ವದ ಪಂದ್ಯದಲ್ಲಿ ಕತರ್ ಗೆ ವಿವಾದಾತ್ಮಕ ಗೋಲು ಗಳಿಸಲು ಅವಕಾಶ ನೀಡಿರುವ ಕುರಿತು ತನಿಖೆ ನಡೆಯಬೇಕು ಎಂದು ಅಖಿಲ ಭಾರತ ಫುಟ್ ಬಾಲ್ ಒಕ್ಕೂಟ(AIFF)ವು ಪಂದ್ಯದ ಆಯುಕ್ತರ ಬಳಿ ದೂರು ದಾಖಲಿಸಿದೆ.
ಮಂಗಳವಾರ ಜಾಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಕತರ್ ವಿರುದ್ಧ ನಡೆದಿದ್ದ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ದಕ್ಷಿಣ ಕೊರಿಯನ್ ರೆಫ್ರಿ ಕಿಮ್ ವೂ-ಸಂಗ್ ಅವರು ಗೋಲುಪಟ್ಟಿಯಿಂದ ಗೋಲು ಹೊರ ಹೋಗುತ್ತಿದ್ದರೂ, ಗೋಲು ಹೊಡೆಯಲು ಅವಕಾಶ ನೀಡಿದ್ದರ ಕುರಿತು ಆಳವಾದ ತನಿಖೆ ನಡೆಸಬೇಕು ಎಂದು ಅಖಿಲ ಭಾರತ ಫುಟ್ ಬಾಲ್ ಒಕ್ಕೂಟವು ಆಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಈ ಪಂದ್ಯದಲ್ಲಿ ಭಾರತವು ಕತರ್ ಎದುರು 1-2 ಅಂತರದಲ್ಲಿ ಪರಾಭವಗೊಂಡಿತ್ತು.
ಈ ಗೋಲಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಗೋಲಿನಿಂದಾಗಿ 2026ನೇ ಆವೃತ್ತಿಯ ಫೀಫಾ ವಿಶ್ವಕಪ್ ಅರ್ಹತಾ ತಂಡಗಳ ಮೂರನೆಯ ಸುತ್ತಿಗೆ ಚೊಚ್ಚಲ ಬಾರಿ ಪ್ರವೇಶಿಸುವ ಅವಕಾಶದಿಂದ ಭಾರತವು ವಂಚಿತಗೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ಫುಟ್ ಬಾಲ್ ಒಕ್ಕೂಟದ ಅಧಿಕಾರಿಯೊಬ್ಬರು, “ನಾವು ಪಂದ್ಯದ ಆಯುಕ್ತರ ಬಳಿ ದೂರು ದಾಖಲಿಸಿದ್ದೇವೆ ಹಾಗೂ ಇಡೀ ಪಂದ್ಯದ ಕುರಿತು ಆಳವಾದ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ” ಎಂದು ಹೇಳಿದ್ದಾರೆ.
We’ll leave it here!#INDQAT #IndianFootball pic.twitter.com/5KhtyOfrvS
— FanCode (@FanCode) June 11, 2024