ಕ್ವಿಟ್ ಇಂಡಿಯಾ ಚಳವಳಿ ಉಲ್ಲೇಖಿಸಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಹೊಸದಿಲ್ಲಿ/ಕೋಲ್ಕತ್ತಾ: ಇಂದು ರೈಲ್ವೇಯ ಬೃಹತ್ ಪುನರಾಭಿವೃದ್ದಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, "ಭ್ರಷ್ಟಾಚಾರ, ವಂಶವಾದ ಮತ್ತು ತುಷ್ಟೀಕರಣವು ಭಾರತವನ್ನು ತೊರೆಯುವ ಸಮಯ" ಬಂದಿದೆ ಎಂದು ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯಿಂದ ಪ್ರೇರಿತರಾಗಿ, ಇಡೀ ದೇಶವು ಈಗ ಭ್ರಷ್ಟಾಚಾರ, ವಂಶರಾಜಕೀಯ, ತುಷ್ಟೀಕರಣ ಭಾರತವನ್ನು ತೊರೆಯಬೇಕು ಎಂದು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಅಡಿಪಾಯ ಹಾಕಿದ ನಂತರ ವರ್ಚುವಲ್ ಅಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರತಿಪಕ್ಷಗಳು "ನಕಾರಾತ್ಮಕ ರಾಜಕೀಯ" ದಲ್ಲಿ ತೊಡಗಿವೆ ಎಂದು ಆರೋಪಿಸಿದರು.
ನಕಾರಾತ್ಮಕ ರಾಜಕೀಯದಿಂದ ಮೇಲೆದ್ದು, ಅಭಿವೃದ್ಧಿಗೆ ಆದ್ಯತೆ ನೀಡಿ ಮಿಷನ್ ಮೋಡ್ನಲ್ಲಿ ಸಕಾರಾತ್ಮಕ ರಾಜಕಾರಣದ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದರು.
"ಪ್ರತಿಪಕ್ಷದ ಒಂದು ಭಾಗವು ತಾವು ಕೆಲಸ ಮಾಡುವುದಿಲ್ಲ ಅಥವಾ ಇತರರಿಗೆ ಕೆಲಸ ಮಾಡಲು ಬಿಡುವುದಿಲ್ಲ ಎಂಬ ತತ್ವದ ಮೇಲೆ ಕೆಲಸ ಮಾಡುತ್ತಿದೆ. ಇಂದು ಇಡೀ ವಿಶ್ವದ ಗಮನ ಭಾರತದತ್ತ ನೆಟ್ಟಿದೆ’’ ಎಂದರು.
ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತ ಅಮೃತ ಕಾಲದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪಗಳಿವೆ ಮತ್ತು ಈ ಉತ್ಸಾಹದಲ್ಲಿ ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.