ಮಧ್ಯರಾತ್ರಿಯಲ್ಲಿ ಸಿಇಸಿ ನೇಮಕ ಪ್ರಧಾನಿ, ಗೃಹ ಸಚಿವರಿಗೆ ಗೌರವ ತರುವುದಿಲ್ಲ: ರಾಹುಲ್
ಆಯ್ಕೆ ಸಭೆಯ ವೇಳೆ ಭಿನ್ನಮತ ಪತ್ರ ಸಲ್ಲಿಕೆ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯ ಸಂಯೋಜನೆ ಮತ್ತು ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವಾಗಲೇ, ನೂತನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ)ರನ್ನು ಮಧ್ಯರಾತ್ರಿಯಲ್ಲಿ ನೇಮಿಸಿರುವ ಕ್ರಮವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರಿಗೆ ‘‘ಗೌರವ’’ ತರುವುದಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಆಯ್ಕೆ ಸಮಿತಿಯ ಸದಸ್ಯ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಸರಕಾರವು ಸೋಮವಾರ ಮಧ್ಯರಾತ್ರಿ ಜ್ಞಾನೇಶ್ ಕುಮಾರ್ ರನ್ನು ನೂತನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ)ರಾಗಿ ನೇಮಿಸಲಾಗಿದೆ. ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯು ಸಭೆ ನಡೆಸಿದ ಗಂಟೆಗಳ ಬಳಿಕ ನೂತನ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಲಾಗಿದೆ.
ಆಯ್ಕೆ ಸಮಿತಿಯ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವರೆಗೆ ಆಯ್ಕೆಯನ್ನು ಮುಂದೂಡುವಂತೆ ಸಮಿತಿಯ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದರು. ಇದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಡೆಸಲಿದೆ.
ಸಭೆಯ ವೇಳೆ, ರಾಹುಲ್ ಗಾಂಧಿ ಭಿನ್ನಮತದ ಪತ್ರವೊಂದನ್ನೂ ಸಮಿತಿಗೆ ಸಲ್ಲಿಸಿದರು.
‘‘ನೂತನ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಭೆಯಲ್ಲಿ, ನಾನು ಪ್ರಧಾನಿ ಮತ್ತು ಗೃಹ ಸಚಿವರಿಗೆ ಭಿನ್ನಮತದ ಪತ್ರವೊಂದನ್ನು ಸಲ್ಲಿಸಿದೆ. ‘ಸ್ವತಂತ್ರ ಚುನಾವಣಾ ಆಯೋಗವೊಂದು ಸರಕಾರದ ಹಸ್ತಕ್ಷೇಪದಿಂದ ಮುಕ್ತವಾಗಿದೆಯೇ ಇಲ್ಲವೇ ಎನ್ನುವುದನ್ನು ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ನಿರ್ಧರಿಸುತ್ತದೆ’ ಎಂಬುದಾಗಿ ಭಿನ್ನಮತದ ಪತ್ರ ಹೇಳುತ್ತದೆ’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಾಕಿದ ಸಂದೇಶವೊಂದರಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
‘‘ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸುವ ಮೂಲಕ ಮತ್ತು ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರದಬ್ಬುವ ಮೂಲಕ, ನಮ್ಮ ಚುನಾವಣಾ ಪ್ರಕ್ರಿಯೆಯ ಋಜುತ್ವದ ಬಗ್ಗೆ ಕೋಟ್ಯಾಂತರ ಮತದಾರರು ಹೊಂದಿರುವ ಕಳವಳವನ್ನು ಮೋದಿ ಸರಕಾರ ಹೆಚ್ಚಿಸಿದೆ’’ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠವು 2023 ಮಾರ್ಚ್ 2ರಂದು ತೀರ್ಪೊಂದನ್ನು ನೀಡಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕವನ್ನು ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯೊಂದು ಮಾಡಬೇಕು ಎಂದು ಆದೇಶಿಸಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘‘ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ನಮ್ಮ ದೇಶವನ್ನು ಸ್ಥಾಪಿಸಿದ ನಾಯಕರ ಆದರ್ಶಗಳನ್ನು ಎತ್ತಿಹಿಡಿಯುವುದು ಹಾಗೂ ಸರಕಾರವನ್ನು ಉತ್ತರದಾಯಿಯಾಗಿಸುವುದು ಪ್ರತಿಪಕ್ಷ ನಾಯಕನಾಗಿ ನನ್ನ ಕರ್ತವ್ಯವಾಗಿದೆ’’ ಎಂದರು.
‘‘ನಮ್ಮ ಚುನಾವಣಾ ಪ್ರಕ್ರಿಯೆಯ ಸಾಚಾತನದ ಬಗ್ಗೆ ಕೊಟ್ಯಂತರ ಮತದಾರರಲ್ಲಿ ಇರುವ ಕಳವಳವನ್ನೇ ಸುಪ್ರೀಂ ಕೋರ್ಟ್ ತೀರ್ಪು ಬಿಂಬಿಸಿದೆ. ಭಾರತದ ಚುನಾವಣಾ ಪ್ರಕ್ರಿಯೆ ಮತ್ತು ಅದರ ಸಂಸ್ಥೆಗಳ ಮೇಲೆ ಮತದಾರರ ನಂಬಿಕೆ ನಿರಂತರವಾಗಿ ಕುಸಿಯುತ್ತಿರುವುದನ್ನು ಸಮೀಕ್ಷೆಗಳೂ ಹೇಳಿವೆ’’ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ತನ್ನ ಭಿನ್ನಮತದ ಪತ್ರದಲ್ಲಿ ಹೇಳಿದ್ದಾರೆ.
ದುರದೃಷ್ಟವಶಾತ್, ಸುಪ್ರೀಂ ಕೋರ್ಟ್ ತೀರ್ಪಿನ ಸ್ವಲ್ಪ ಸಮಯದ ಬಳಿಕ, 2023 ಆಗಸ್ಟ್ನಲ್ಲಿ, ತೀರ್ಪಿನ ಎಲ್ಲಾ ಆಶಯಗಳನ್ನು ಗಾಳಿಗೆ ತೂರುವ ಕಾನೂನೊಂದನ್ನು ಭಾರತ ಸರಕಾರವು ಜಾರಿಗೆ ತಂದಿತು ಎಂದು ಅವರು ನುಡಿದರು. ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರದಬ್ಬಿರುವುದು ಸುಪ್ರೀಂ ಕೋರ್ಟ್ ಆದೇಶದ ಅಕ್ಷರ ಮತ್ತು ಆಶಯದ ಸಾರಾಸಗಟು ಉಲ್ಲಂಘನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
‘‘ಸರಕಾರದ ಕಾನೂನು, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯನ್ನು ಪುನರ್ರಚಿಸಿತು. ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರದಬ್ಬಿತು ಹಾಗೂ ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಪ್ರಧಾನಿ ನೇಮಿಸುವ ಓರ್ವ ಕೇಂದ್ರ ಸಂಪುಟದ ಸಚಿವರನ್ನು ಸಮಿತಿಗೆ ಸೇರಿಸಿತು’’ ಎಂದು ಅವರು ಹೇಳಿದ್ದಾರೆ.