ಸಂಸದ ಸ್ಥಾನ ಮರುಸ್ಥಾಪನೆಗೊಂಡ ಬೆನ್ನಲ್ಲೇ ಸಂಸತ್ ಭವನ ಪ್ರವೇಶಿಸಿದ ರಾಹುಲ್ ಗಾಂಧಿ
Screengrab: Twitter/@INCIndia
ಹೊಸದಿಲ್ಲಿ: ಲೋಕಸಭೆಯ ಸಂಸತ್ ಸದಸ್ಯ ಸ್ಥಾನವನ್ನು ಸಚಿವಾಲಯವು ಮರುಸ್ಥಾಪಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ಸೋಮವಾರ ರಾಹುಲ್ ಗಾಂಧಿ ಸಂಸತ್ ಭವನದ ಬಳಿ ತಲುಪಿದರು. ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿರುವ ಲೋಕಸಭಾ ಕಲಾಪಗಳಲ್ಲಿ ಭಾಗವಹಿಸುವುದಕ್ಕೂ ಮುನ್ನ ಅವರು ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿದರು. ಕಳೆದ ವಾರ, ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ನಾಳೆ ಲೊಕಸಭೆಯಲ್ಲಿ ಪ್ರಾರಂಭವಾಗಲಿರುವ ಅವಿಶ್ವಾಸಮತ ನಿರ್ಣಯ ಕುರಿತ ಚರ್ಚೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುವುದನ್ನು ಕಾಂಗ್ರೆಸ್ ಎದುರು ನೋಡುತ್ತಿದೆ ಎಂದು indianexpress.com ವರದಿ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2018ರಲ್ಲಿ ಕೋಲಾರದಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ "ಯಾಕೆ ಎಲ್ಲ ವಂಚಕರ ಹೆಸರಲ್ಲೂ ಮೋದಿ ಉಪನಾಮವಿದೆ?" ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಹುಲ್ ಗಾಂಧಿಯವರ ಈ ಟೀಕೆಯಿಂದ ಸಮುದಾಯವೊಂದರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಗುಜರಾತ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದರಲ್ಲಿ ದಾವೆ ಹೂಡಲಾಗಿತ್ತು. ಈ ದಾವೆಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿ, ಅವರಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಿಗೇ ಲೋಕಸಭೆಯ ಸಚಿವಾಲಯವು ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿತ್ತು. ಈ ತೀರ್ಪನ್ನು ಸೆಷನ್ಸ್ ನ್ಯಾಯಾಲಯ ಹಾಗೂ ಸೂರತ್ ಹೈಕೋರ್ಟ್ ಕೂಡಾ ಎತ್ತಿ ಹಿಡಿದಿದ್ದವು.
ಸೂರತ್ ಹೈಕೋರ್ಟ್ನ ತೀರ್ಪನ್ಮು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಕಳೆದ ವಾರ ಈ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಸೂರತ್ ಹೈಕೋರ್ಟ್ನ ತೀರ್ಪು ದೋಷಪೂರಿತವಾಗಿದೆ ಹಾಗೂ ಈ ತೀರ್ಪಿನಿಂದ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡ್ ಲೋಕಸಭಾ ಕ್ಷೇತ್ರದ ಮತದಾರರಿಗೆ ಗಂಭೀರ ನಷ್ಟವುಂಟಾಗಿದೆ ಎಂದು ಅಭಿಪ್ರಾಯ ಪಟ್ಟು, ರಾಹುಲ್ ಗಾಂಧಿಗೆ ವಿಧಿಸಲಾಗಿದ್ದ ಶಿಕ್ಷೆಗೆ ತಡೆ ನೀಡಿತ್ತು. ಇದರಿಂದ ರಾಹುಲ್ ಗಾಂಧಿಯವರ ಸಂಸದ ಸ್ಥಾನದ ಅನರ್ಹತೆಯೂ ಅನೂರ್ಜಿತಗೊಂಡಿತ್ತು.
ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯನ್ನು ಶನಿವಾರವೇ ಲೋಕಸಭೆಯ ಸಚಿವಾಲಯಕ್ಕೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ತಲುಪಿಸಿದ್ದರು. ಅಲ್ಲದೆ, ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ಮರುಸ್ಥಾಪಿಸಲು ಆಗುತ್ತಿರುವ ವಿಳಂಬವನ್ನು ಪ್ರಶ್ನಿಸಿದ್ದರು. ಇದಾದ ನಂತರ ಸೋಮವಾರದ ವೇಳೆಗೆ ರಾಹುಲ್ ಗಾಂಧಿಯವರ ಸಂಸದ ಸ್ಥಾನ ಮರುಸ್ಥಾಪನೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರಂತೆ ಅವರ ಸಂಸದ ಸ್ಥಾನ ಮರುಸ್ಥಾಪನೆಗೊಂಡ ಬೆನ್ನಿಗೇ ರಾಹುಲ್ ಗಾಂಧಿ ಸಂಸತ್ ಭವನವನ್ನು ಪ್ರವೇಶಿಸಿದ್ದಾರೆ.
ಇದಕ್ಕೂ ಮುನ್ನ, ಸೋಮವಾರ ಬೆಳಗ್ಗೆ ಸದನದಲ್ಲಿ ತೀವ್ರ ಕೋಲಾಹಲ ಉಂಟಾಗಿದ್ದರಿಂದ ಲೋಕಸಭಾ ಕಲಾಪಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಗಿದ್ದರೆ, ರಾಜ್ಯಸಭಾ ಕಲಾಪಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ. ಈ ನಡುವೆ ಕಾಂಗ್ರೆಸ್ ಆಡಳಿತಾರೂಢ ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಚರ್ಚೆ ನಡೆಯಬೇಕು ಎಂದು ಬಿಜೆಪಿ ಸಂಸದರು ಪಟ್ಟು ಹಿಡಿದಿದ್ದರೆ, ಮಣಿಪುರದಲ್ಲಿ ಮುಂದುವರಿದಿರುವ ಹಿಂಸಾಚಾರದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.