ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ: ಪ್ರಧಾನಿ ಮೋದಿಗೆ ಸಂಸತ್ತಲ್ಲಿ ಸವಾಲು ಹಾಕಲು ಈಗ ಅಧಿಕೃತ ಮಾನ್ಯತೆ
ನರೇಂದ್ರ ಮೋದಿ , ರಾಹುಲ್ ಗಾಂಧಿ | PTI
ಹೊಸದಿಲ್ಲಿ: 18ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ಸಂಸದ ಓಂ ಬಿರ್ಲಾ ಅವರು ಬುಧವಾರ ಆಯ್ಕೆಯಾಗಿದ್ದಾರೆ. ಓಂ ಬಿರ್ಲಾ ಅವರು ಲೋಕಸಭೆಯ ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ಕಂಡು ಬಂದ ದೃಶ್ಯ ಈ ಲೋಕಸಭೆಯಲ್ಲಿ ವಿಪಕ್ಷವಿದೆ ಮತ್ತು ಕೇವಲ ಹೆಸರಿಗೆ ಮಾತ್ರವಲ್ಲದೇ ನಿಜವಾದ ವಿಪಕ್ಷ ಈ ಬಾರಿ ಲೋಕಸಭೆಯಲ್ಲಿ ಕಾಣಲಿದೆ ಎಂಬ ಆಶಾಭಾವವನ್ನು ಹುಟ್ಟು ಹಾಕಿದೆ.
ಸ್ಪೀಕರ್ ಆಗಿ ಮರು ಆಯ್ಕೆಯಾದ ಓಂ ಬಿರ್ಲಾ ಅವರನ್ನು ಸ್ವಾಗತಿಸಿ ಹಸ್ತಲಾಘವ ಮಾಡಿ ಸ್ಪೀಕರ್ ಪೀಠಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರೆದುಕೊಂಡು ಹೋದರು.
ಸಾಮಾನ್ಯವಾಗಿ ಇದೇ ಸಂಪ್ರದಾಯವನ್ನು ಶಾಸನ ಸಭೆಯಲ್ಲಿ ಪಾಲಿಸಲಾಗುತ್ತದೆ. ನೂತನ ಸ್ಪೀಕರ್ ಅನ್ನು ಸದನದ ನಾಯಕರಾದ ಪ್ರಧಾನಿ ಅಥವಾ ಸಿಎಂ, ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ವಿಪಕ್ಷ ನಾಯಕ ಕರೆದುಕೊಂಡು ಹೋಗಿ ಪೀಠದಲ್ಲಿ ಕೂರಿಸುತ್ತಾರೆ. ಕಳೆದೆರಡು ಲೋಕಸಭೆಗಳಲ್ಲಿ ಅಧಿಕೃತ ವಿಪಕ್ಷ ನಾಯಕರೇ ಇರಲಿಲ್ಲ. ಈ ಬಾರಿ ಅಧಿಕೃತ ವಿಪಕ್ಷ ನಾಯಕರಿದ್ದಾರೆ. ಮತ್ತದು ರಾಹುಲ್ ಗಾಂಧಿ ಎಂಬುದು ಇನ್ನೊಂದು ವಿಶೇಷ.
ದೇಶದಲ್ಲಿ ಈಗ ಕೇವಲ ಸರಕಾರ ಮಾತ್ರ ಅಲ್ಲ, ಸಮರ್ಥ ವಿಪಕ್ಷವೂ ಇದೆ ಎಂಬುದು 10 ವರ್ಷಗಳ ನಂತರ ಎದ್ದು ಕಾಣುತ್ತಿದೆ. ಕಳೆದೆರಡು ಲೋಕಸಭೆಗಳಲ್ಲಿ ಕಾಂಗ್ರೆಸ್ ಗೆ ಬಂದಿರುವ ಸೀಟುಗಳು ಒಟ್ಟು ಸೀಟುಗಳ ಹತ್ತು ಶೇಕಡಕ್ಕಿಂತ ಕಡಿಮೆ ಇದ್ದು ಅದಕ್ಕೆ ವಿಪಕ್ಷ ನಾಯಕ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿತ್ತು.
ಮಂಗಳವಾರ ರಾತ್ರಿ ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ವಿರೋಧ ಪಕ್ಷಗಳ ಸದನದ ನಾಯಕರ ಸಭೆಯ ನಂತರ ಘೋಷಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಸದೀಯ ನಾಯಕರ ಸಭೆಯ ನಂತರ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸುವ ಬಗ್ಗೆ ಅಧಿಕೃತ ನಿರ್ಧಾರ ತೆಗೆದುಕೊಳ್ಳಲಾಗಿದೆ.
"ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರಿಗೆ ಪತ್ರ ಬರೆದು, ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ನೇಮಿಸುವ ನಿರ್ಧಾರವನ್ನು ತಿಳಿಸಿದ್ದಾರೆ" ಎಂದು ಪಕ್ಷದ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರ ಸ್ಥಾನವನ್ನು ಅಲಂಕರಿಸಿದ ಗಾಂಧಿ ಕುಟುಂಬದ ಮೂರನೇ ಸದಸ್ಯರಾಗಿದ್ದಾರೆ. 1999 ರಿಂದ 2004 ರವರೆಗೆ ಈ ಹುದ್ದೆಯಲ್ಲಿದ್ದ ಅವರ ತಾಯಿ ಸೋನಿಯಾ ಗಾಂಧಿ ಮತ್ತು 1989 ರಿಂದ 1990 ರವರೆಗೆ ವಿಪಕ್ಷ ನಾಯಕರಾಗಿದ್ದ ಅವರ ತಂದೆ ರಾಜೀವ್ ಗಾಂಧಿ ಅವರ ಹೆಜ್ಜೆಗಳನ್ನು ರಾಹುಲ್ ಗಾಂಧಿ ಅನುಸರಿಸಲಿದ್ದಾರೆ.
ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ನ ಹಿರಿಯ ಸಂಸದ ಕೆ.ಸುರೇಶ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದ ಪ್ರತಿಪಕ್ಷಗಳು ಧ್ವನಿ ಮತದ ಬಳಿಕ ಮತ ಚಲಾಯಿಸಲು ಒತ್ತಾಯಿಸದಿರಲು ನಿರ್ಧರಿಸಿದ ನಂತರ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದರು.
ಘೋಷಣೆಯ ನಂತರ, ಪ್ರಧಾನಿ ಮೋದಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಡಳಿತ ಪಕ್ಷಗಳ ಕಡೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಬಿರ್ಲಾ ಅವರರನ್ನು ಸ್ಪೀಕರ್ ಕುರ್ಚಿಗೆ ಕರೆದೊಯ್ಯಲು ಮುಂದಾದರು. ಈ ಸಂಧರ್ಭದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಅವರ ಜೊತೆಯಿದ್ದರು. ಇಡೀ ವಿಪಕ್ಷಗಳು ಮತ್ತು ಇಂಡಿಯಾ ಮೈತ್ರಿಕೂಟದ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
"ನೀವು ಜನರ ಧ್ವನಿಯ ಅಂತಿಮ ತೀರ್ಪುಗಾರರು. ಸರ್ಕಾರಕ್ಕೆ ರಾಜಕೀಯ ಶಕ್ತಿ ಇರಬಹುದು, ಆದರೆ ಪ್ರತಿಪಕ್ಷವು ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ನಿಮ್ಮ ಕೆಲಸದಲ್ಲಿ ಪ್ರತಿಪಕ್ಷಗಳು ನಿಮಗೆ ಸಹಕರಿಸಲು ಬಯಸುತ್ತವೆ, ಸದನದಲ್ಲಿ ಮಾತನಾಡಲು ನೀವು ನಮಗೆ ಅವಕಾಶ ನೀಡುತ್ತೀರಿ ಎಂದು ನನಗೆ ವಿಶ್ವಾಸವಿದೆ," ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.
“ಕಳೆದ ಬಾರಿಗಿಂತ ಈ ಬಾರಿ ವಿಪಕ್ಷಗಳು ಜನರ ಧ್ವನಿಯನ್ನು ಹೆಚ್ಚು ಗಮನಾರ್ಹವಾಗಿ ಪ್ರತಿನಿಧಿಸುತ್ತಿವೆ. ನೀವು ನಮಗೆ ಮಾತನಾಡಲು ಅವಕಾಶ ಕಲ್ಪಿಸುವಿರಿ ಎಂಬ ವಿಶ್ವಾಸವಿದೆ. ಸದನ ಎಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಶ್ನೆ ಇಲ್ಲಿಲ್ಲ. ಭಾರತದ ಧ್ವನಿಯನ್ನು ಎಷ್ಟರ ಮಟ್ಟಿಗೆ ಕೇಳಿಸಲು ಅನುಮತಿಸಲಾಗುವುದು ಎಂಬ ಪ್ರಶ್ನೆಯಿದೆ. ವಿಪಕ್ಷಗಳಿಗೆ ಮಾತನಾಡಲು ಅವಕಾಶ ಕಲ್ಪಿಸುವ ಮೂಲಕ ನೀವು ಸಂವಿಧಾನವನ್ನು ರಕ್ಷಿಸುವ ನಿಮ್ಮ ಕರ್ತವ್ಯವನ್ನು ನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ,” ಎಂದು ರಾಹುಲ್ ಗಾಂಧಿ ಅವರು ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾದ ನಂತರ ಅವರನ್ನು ಅಭಿನಂದಿಸುತ್ತಾ ಹೇಳಿದರು.
1969 ರಲ್ಲಿ ರಾಮ್ ಸುಹಾಗ್ ಸಿಂಗ್ ಅವರು ಮೊದಲ ಬಾರಿ ವಿಪಕ್ಷ ನಾಯಕನ ಹುದ್ದೆಯನ್ನು ಅಲಂಕರಿಸಿದ್ದರು. ಅಂದಿನಿಂದ, ಈ ಹುದ್ದೆಯು ಸಂಸದೀಯ ಪ್ರಜಾಪ್ರಭುತ್ವದ ಪ್ರಮುಖ ಸ್ಥಾನವಾಗಿ ಬೆಳೆದು ಬಂದಿದೆ.
ವಿಪಕ್ಷ ಹುದ್ದೆಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನವಿದೆ. ಜೊತೆಗೆ ಈ ಹುದ್ದೆಗೆ ಸಾಂವಿಧಾನಿಕ ಪ್ರಾಮುಖ್ಯತೆಯಿದ್ದು ಸಿಬಿಐ, ರಾಹುಲ್ ಗಾಂಧಿ ಈಡಿ ಯಂತಹ ಪ್ರಮುಖ ಏಜೆನ್ಸಿಗಳ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಿತಿಯ ಭಾಗವಾಗಿರಲಿದ್ದಾರೆ .
ಅದಲ್ಲದೆ ಮುಖ್ಯ ಚುನಾವಣಾ ಆಯುಕ್ತರು , ಕೇಂದ್ರೀಯ ವಿಜಿಲೆನ್ಸ್ ಕಮಿಷನರ್ (ಅಗಿಅ), ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಲೋಕಾಯುಕ್ತದಂತಹ ಪ್ರಮುಖ ನೇಮಕ ಸಮಿತಿಯಲ್ಲೂ ವಿಪಕ್ಷದ ನಾಯಕ ಇರುತ್ತಾರೆ.
ರಾಹುಲ್ ಗಾಂಧಿ ಇನ್ನು ಮುಂದೆ ಲೋಕಸಭೆಯಲ್ಲಿ ನೇರವಾಗಿ ಪ್ರಧಾನಿ ಎದುರು ನಿಂತು ಮಾತಾಡಲಿದ್ದಾರೆ. ಅದಕ್ಕೆ ಅವರಿಗೀಗ ಅಧಿಕೃತ ಮಾನ್ಯತೆ ಸಿಕ್ಕಿದೆ. ಅವರು ಮಾತಾಡಲು ಬಯಸಿದಾಗ ಅವರಿಗೆ ಸ್ಪೀಕರ್ ಅವಕಾಶ ಕೊಡಲೇಬೇಕು. ಅವರ ಮಾತನ್ನು ಪ್ರಧಾನಿ ಕೇಳಲೇಬೇಕು.
ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಎಲ್ಲ ವಿಪಕ್ಷಗಳ ಮುಖವಾಗಲಿದ್ದಾರೆ. ಸರಕಾರದ ನೀತಿಗಳ ವಿರುದ್ಧ ಸಂಸತ್ತಿನಲ್ಲಿ ಟೀಕೆ ಟಿಪ್ಪಣಿಯಲ್ಲಿ ಮಾತ್ರವಲ್ಲ ಸಂಸತ್ತಿನ ಹೊರಗೆ ಹೋರಾಟದಲ್ಲೂ ಈಗ ಅವರಿಗೆ ಅಧಿಕೃತ ಬಲ ಬಂದಂತಾಗಿದೆ. ಇದರಿಂದ ಕಾಂಗ್ರೆಸ್ ಕೂಡ ವಿಪಕ್ಷಗಳ ಕೂಟದಲ್ಲಿ ಇನ್ನಷ್ಟು ಪ್ರಾಮುಖ್ಯತೆ ಪಡೆಯಲಿದೆ. ಜೊತೆಗೆ ವಿಪಕ್ಷಗಳ ಸಂಸದರೂ ಮೋದಿ ಸರಕಾರದ ವಿರುದ್ಧದ ರಚನಾತ್ಮಕ ಹೋರಾಟದಲ್ಲಿ ರಾಹುಲ್ ಜೊತೆ ಕೈಜೋಡಿಸಲಿದ್ದಾರೆ.
ಈಗ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ 2019 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ ನಂತರ ಮೊದಲ ಬಾರಿ ಪಕ್ಷದಲ್ಲಿ ಹಾಗು ಆ ಮೂಲಕ ಸಂಸತ್ತಿನಲ್ಲಿ ಅಧಿಕೃತ ಸ್ಥಾನವನ್ನು ಸ್ವೀಕರಿಸಿದ್ದಾರೆ.