ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಕ್ಕೆ ಒಳ ಮೀಸಲಾತಿಗೆ ರಾಹುಲ್ ಗಾಂಧಿ ಆಗ್ರಹ
ಧೈರ್ಯವಿದ್ದರೆ ಜಾತಿ ಗಣತಿಯನ್ನು ಬಹಿರಂಗಪಡಿಸಿ ; ಸರ್ಕಾರಕ್ಕೆ ಸವಾಲು ಹಾಕಿದ ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ | Photo : ANI
ಹೊಸದಿಲ್ಲಿ : ಮಹಿಳಾ ಮಸೂದೆಯನ್ನು ನಾನು ಬೆಂಬಲಿಸುತ್ತೇನೆ. ಮಸೂದೆಯಲ್ಲಿ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದರು. ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಸಂಸದ ರಾಹುಲ್ ಗಾಂಧಿ ಬುಧವಾರ ಸಂಸತ್ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಭಾರತ ಸರ್ಕಾರದ ಕಾರ್ಯದರ್ಶಿಗಳನ್ನು ನೇಮಕ ಮಾಡುವಲ್ಲಿ ಮೋದಿ ಸರ್ಕಾರ ಹಿಂದುಳಿದ ವರ್ಗಗಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಭಾರತ ಸರ್ಕಾರದಲ್ಲಿ 90 ಕಾರ್ಯದರ್ಶಿಗಳಿದ್ದರೆ, ಕೇವಲ ಮೂವರು ಹಿಂದುಳಿದ ವರ್ಗಕ್ಕೆ ಸೇರಿದವರು. ಈ ಮೂವರು ಕಾರ್ಯದರ್ಶಿಗಳು ದೇಶದ ಬಜೆಟ್ನ ಶೇಕಡಾ ಐದರಷ್ಟನ್ನು ಮಾತ್ರ ನಿಯಂತ್ರಿಸುತ್ತಾರೆ. ಒಬಿಸಿ ಕಾರ್ಯದರ್ಶಿಗಳ ಕೊರತೆಯು ಸಮುದಾಯಕ್ಕೆ ಮಾಡಿದ ಅವಮಾನ. ಹಾಗಾಗಿ ಇದನ್ನು ಸರ್ಕಾರ ಬದಲಾಯಿಸಬೇಕು ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದರು.
ಸರ್ಕಾರ ಕೂಡಲೇ ಮಸೂದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ರಾಹುಲ್ ಗಾಂಧಿ, ಜನಗಣತಿ ನಂತರ ನಡೆಸಬಹುದು. ಅದಕ್ಕಾಗಿ ವಿಧೇಯಕ ಜಾರಿಯಾಗುವ ಅಗತ್ಯವಿಲ್ಲ. ನಿಮ್ಮ ಸರ್ಕಾರಕ್ಕೆ ಧೈರ್ಯವಿದ್ದರೆ ಜಾತಿ ಗಣತಿಯನ್ನು ಜನತೆಯ ಮುಂದೆ ಇಡಿ, ಇಲ್ಲದಿದ್ದರೆ ಮುಂದೆ ಅದನ್ನು ಕಾಂಗ್ರೆಸ್ ಮಾಡಲಿದೆ ಎಂದು ಸವಾಲು ಹಾಕಿದರು.