ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ನಿಲ್ಲಿಸಲಾಗುವುದಿಲ್ಲವೇ? : ರಾಹುಲ್ ಗಾಂಧಿ ಪ್ರಶ್ನೆ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ : ರಷ್ಯಾ- ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಪ್ರಧಾನಿ ಮೋದಿಗೆ ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಮಂಗಳವಾರ ಜೂನ್ 18 ರಂದು ನಡೆದಿದ್ದ ಯುಜಿಸಿ-ನೆಟ್ ಪರೀಕ್ಷೆಯನ್ನು, ಜೂನ್ 19ರಂದು ಬುಧವಾರ ರದ್ದು ಮಾಡಿದ ವಿಚಾರ ಸೇರಿದಂತೆ ನಡೆಯುತ್ತಿರುವ ನೀಟ್ ವಿವಾದದ ಬಗ್ಗೆ ಕೇಂದ್ರ ಸರಕಾದ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
'ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮಾತೃಸಂಸ್ಥೆ ವಶಪಡಿಸಿಕೊಂಡಿರುವುದರಿಂದ ಪತ್ರಿಕೆ ಸೋರಿಕೆಯಾಗುತ್ತಿದೆ' ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದು ಬದಲಾಗುವವರೆಗೆ ಪ್ರಶ್ನೆ ಪತ್ರಿಕೆ ಸೋರಿಕೆಗಳು ನಡೆಯುತ್ತಲೇ ಇರುತ್ತದೆ. ಮೋದಿ ಪತ್ರಿಕೆ ಸೋರಿಕೆಯನ್ನು ಅನುಕೂಲ ಮಾಡಿಕೊಟ್ಟಿದ್ದಾರೆ. ಇದು ದೇಶ ವಿರೋಧಿ ಚಟುವಟಿಕೆ ಎಂದು ಕಿಡಿಕಾರಿದರು.
ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿಲ್ಲ ಆದರೆ "ನಿರ್ದಿಷ್ಟ ಸಂಸ್ಥೆ" ಯೊಂದಿಗೆ ಅವರ ಸಂಪರ್ಕದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಈ ಸಂಘಟನೆ ಮತ್ತು ಬಿಜೆಪಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿದೆ. ನೋಟು ಅಮಾನ್ಯೀಕರಣದ ಮೂಲಕ ಆರ್ಥಿಕತೆಗೆ ನರೇಂದ್ರ ಮೋದಿ ಮಾಡಿದ್ದನ್ನು ಈಗ ಶಿಕ್ಷಣ ವ್ಯವಸ್ಥೆಯಲ್ಲಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ತಮ್ಮ ಪಕ್ಷವು NEET ವಿವಾದ ಮತ್ತು UGC-NET ರದ್ದತಿ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು NEET ಪರೀಕ್ಷೆ ಅಕ್ರಮದಿಂದ ಸಂತ್ರಸ್ತರಾದ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.