ಹತ್ರಾಸ್ : ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
Photo | PTI
ಹತ್ರಾಸ್: ವಿಪಕ್ಷ ನಾಯಕ ರಾಹುಲ್ ಗಾಂಧಿ ಹತ್ರಾಸ್ ನ ಬೂಲ್ಗರಿ ಗ್ರಾಮದಲ್ಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಗುರುವಾರ ಭೇಟಿ ಮಾಡಿದರು.
2020ರಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು. ಹತ್ರಾಸ್ ಪ್ರಕರಣವನ್ನು ಸಿಬಿಐ ಮುಕ್ತಾಯಗೊಳಿಸಿದ್ದರೂ, ಅಲ್ಲಿನ ಪರಿಸ್ಥಿತಿಯನ್ನು ಪ್ರಚೋದಿಸಲು ಅಲ್ಲಿಗೆ ಭೇಟಿ ನೀಡುವ ಅಗತ್ಯವೇನಿತ್ತು ಎಂದು ರಾಹುಲ್ ಗಾಂಧಿಯನ್ನು ಬಿಜೆಪಿ ನಾಯಕ ಬಲದೇವ್ ಸಿಂಗ್ ಔಲಾಖ್ ಪ್ರಶ್ನಿಸಿದ್ದಾರೆ.
"ಹತ್ರಾಸ್ ಪ್ರಕರಣವನ್ನು ಸಿಬಿಐ ಮುಕ್ತಾಯಗೊಳಿಸಿದೆ. ಅಲ್ಲಿನ ಪರಿಸ್ಥಿತಿಯನ್ನು ಪ್ರಚೋದಿಸುವ ಅಗತ್ಯ ಅವರಿಗೇನಿದೆ? ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಅಗತ್ಯ ಅವರಿಗೇನಿದೆ? ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿರುವವರೆಗೂ ರಾಹುಲ್ ಗಾಂಧಿಯ ಉತ್ತರ ಪ್ರದೇಶ ಪ್ರವಾಸದಿಂದ ಯಾವುದೇ ಬದಲಾವಣೆಯಾಗದು. ಸಿಖ್ ಸಮುದಾಯದ ಮೇಲೆ ತಮ್ಮ ಕುಮ್ಮಕ್ಕಿನಿಂದ ನಡೆದ ದೌರ್ಜನ್ಯಗಳಿಗೆ ಅವರೆಂದೂ ಕ್ಷಮೆ ಕೋರಿಲ್ಲ" ಎಂದು ಅವರು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯನ್ನು ಹತಾಶೆಯ ಸಂತ್ರಸ್ತ ಎಂದು ಬಣ್ಣಿಸಿರುವ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಅವರು ಪರಿಸ್ಥಿತಿಯ ಲಾಭ ಪಡೆದು, ಅಶಾಂತಿಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸೆಪ್ಟೆಂಬರ್ 14, 2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆಗೀಡಾಗಿದ್ದ 19 ವರ್ಷದ ದಲಿತ ಯುವತಿ, ಸೆಪ್ಟೆಂಬರ್ 29, 2020ರಲ್ಲಿ ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ, ಇತ್ತೀಚೆಗೆ ನ್ಯಾಯಾಲಯಕ್ಕೆ ಮುಕ್ತಾಯದ ವರದಿ ಸಲ್ಲಿಸಿತ್ತು.