ರಾಹುಲ್ ಗಾಂಧಿ ಅಮೇಠಿಯಿಂದ ಸ್ಪರ್ಧಿಸಲಿದ್ದಾರೆಯೇ?: ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಹೇಳಿದ್ದು ಹೀಗೆ…
ಲಕ್ನೊ: 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಶುಕ್ರವಾರ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಜಯ್ ರಾಯ್ ದೃಢಪಡಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ನಿರ್ಧಾರವು ರಾಹುಲ್ ಗಾಂಧಿ ಹಾಗೂ ಭಾರತೀಯ ಜನತಾ ಪಕ್ಷದ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಚುನಾವಣಾ ಹಣಾಹಣಿ ನಡೆಯುವ ಸುಳಿವನ್ನು ನೀಡಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಹಾಗೂ ವಯನಾಡ್ ಕ್ಷೇತ್ರಗಳೆರಡರಿಂದಲೂ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಅಮೇಠಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಪರಾಭವಗೊಂಡರೆ, ವಯನಾಡ್ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದರಾಗಿ ಆಯ್ಕೆಯಾಗಿದ್ದರು.
ಅಮೇಠಿ ಲೋಕಸಭಾ ಕ್ಷೇತ್ರವು ಗಾಂಧಿ ಕುಟುಂಬದ ಭದ್ರ ಕೋಟೆಯಾಗಿದ್ದು, ತಮ್ಮ ತಾಯಿ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ತೆರವುಗೊಳಿಸಿದ ನಂತರ 2004ರಿಂದ ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾ ಬರುತ್ತಿದ್ದಾರೆ.