ಹಿಂಸಾಪೀಡಿತ ಮಣಿಪುರಕ್ಕೆ 2 ದಿನಗಳ ಭೇಟಿ ನೀಡಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಹೊಸದಿಲ್ಲಿ: ಹಿಂಸಾಪೀಡಿತ ಮಣಿಪುರ ರಾಜ್ಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಭೇಟಿ ನೀಡಲಿದ್ದಾರೆ. ರಾಹುಲ್ ಅವರ ಈ ಭೇಟಿ ಪಕ್ಷದ “ಹೀಲಿಂಗ್ ಟಚ್” ಅಭಿಯಾನದಂಗವಾಗಿ ನಡೆಯಲಿದ್ದು ಗುರುವಾರ ಭೇಟಿ ನೀಡಲಿರುವ ರಾಹುಲ್ ಶುಕ್ರವಾರ ಅಲ್ಲಿಂದ ಮರಳಲಿದ್ದಾರೆ.
ರಾಹುಲ್ ಅವರು ಇಂಫಾಲ್ ಕಣಿವೆ ಹಾಗೂ ಬುಡಕಟ್ಟು ಪ್ರದೇಶಗಳಾಗಿರುವ ಗುಡ್ಡಗಾಡು ಜಿಲ್ಲೆಗಳಿಗೂ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರ ಈ ಮಣಿಪುರ ಭೇಟಿ ಪ್ರಧಾನಿ ಮೋದಿಗೆ ದೊಡ್ಡ ತಿರುಗೇಟು ಆಗಲಿದೆ ಎಂದು ಕಾಂಗ್ರೆಸ್ ನಿರೀಕ್ಷಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಅವರನ್ನು ಪ್ರಶ್ನಿಸಿದೆ. ಅಮೆರಿಕಾ ಭೇಟಿಯಿಂದ ವಾಪಸಾದ ವೇಳೆ ಮೋದಿ ಅವರು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನುದ್ದೇಶಿಸಿ “ದೇಶದಲ್ಲೇನು ನಡೆಯುತ್ತಿದೆ?” ಎಂದು ಕೇಳಿದ್ದನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ “ಒಂದು ಕಡೆ ಮಣಿಪುರ ಉರಿಯುತ್ತಿದ್ದರೆ ಇನ್ನೊಂದು ಕಡೆ ಮೋದಿಯ ಪ್ರಚಾರ ಪೂರ್ಣಪ್ರಮಾಣದಲ್ಲಿದೆ,” ಎಂದು ಹೇಳಿದರು.
ಮಣಿಪುರ ಭೇಟಿ ವೇಳೆ ರಾಹುಲ್ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ಅಜೊಯ್ ಕುಮಾರ್ ಇರಲಿದ್ದಾರೆ. ಆದರೆ ರಾಹುಲ್ ಅವರಿಗೆ ರಾಜ್ಯದ ಹಲವೆಡೆ ಭೇಟಿ ನೀಡಲು ಹಾಗೂ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲು ಸರ್ಕಾರ ಅನುಮತಿಸಲಿದೆಯೇ ಎಂಬ ಪ್ರಶ್ನೆಯಿದೆ.