ನಿಯಮ ಉಲ್ಲಂಘಿಸಿರುವ ದೂಧ್ ಸಾಗರ್ ಟ್ರೆಕ್ಕರ್ ಗಳಿಗೆ ಬಸ್ಕಿ ಮಾಡಿಸಿದ ರೈಲ್ವೆ ಪೊಲೀಸರು: ವೀಡಿಯೊ ವೈರಲ್
ಪಣಜಿ: ಗೋವಾ-ಕರ್ನಾಟಕ ಗಡಿಯಲ್ಲಿ ದೂಧ್ ಸಾಗರ್ ಗೆ ಟ್ರೆಕ್ಕಿಂಗ್ ಗೆ ತೆರಳಿದ್ದವರಿಗೆ ಗೋವಾ ರೈಲ್ವೆ ಪೊಲೀಸರು ಬಸ್ಕಿ ಮಾಡಿಸಿರುವ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ
ನಿಗದಿತ ನಿಲ್ದಾಣಕ್ಕಿಂತ ಮೊದಲು ರೈಲಿನಿಂದ ಇಳಿದಿರುವುದು ಹಾಗೂ ಜಲಪಾತವನ್ನು ತಲುಪಲು ರೈಲು ಹಳಿಗಳನ್ನು ದಾಟಿರುವುದಕ್ಕೆ ಪ್ರವಾಸಿಗರ ಗುಂಪನ್ನು ರೈಲ್ವೆ ಪೊಲೀಸರು ದಂಡಿಸಿದ್ದಾರೆ ಎಂದು ಟ್ವೀಟ್ ಗಳು ಮತ್ತು ಹಲವಾರು ಔಟ್ ಲೆಟ್ ಗಳು ಹೇಳುತ್ತವೆ..
ನಿಯಮಗಳ ಪ್ರಕಾರ ನಿಗದಿತ ನಿಲ್ದಾಣಕ್ಕಿಂತ ಮೊದಲು ರೈಲಿನಿಂದ ಇಳಿಯುವುದು, ಜಲಪಾತವನ್ನು ತಲುಪಲು ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಮಾನ್ಸೂನ್ ಋತುವಿನಲ್ಲಿ ಈ ಜಲಪಾತವು ಪ್ರವಾಸಿಗರಿಗೆ ಪ್ರಸಿದ್ಧ ಸ್ಥಳವಾಗಿದೆ ಏಕೆಂದರೆ ಹಚ್ಚ ಹಸಿರಿನ ಹೊದಿಕೆಯ ಮೂಲಕ ಜಲಪಾತವು ಸುಂದರವಾದ ದೃಶ್ಯವನ್ನು ಸೃಷ್ಟಿಸುತ್ತದೆ.
ಮಳೆಗಾಲದಲ್ಲಿ ಜಲಪಾತಗಳು ಭವ್ಯವಾಗಿ ಕಾಣುವುದರಿಂದ, ಬೆಂಗಳೂರು, ಮಂಗಳೂರು, ಬೆಳಗಾವಿ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಮತ್ತು ಬಾಗಲಕೋಟೆ, ಪುಣೆ ಮತ್ತು ಮಹಾರಾಷ್ಟ್ರದ ಇತರ ಜಿಲ್ಲೆಗಳಿಂದ ಜನರು ರಮಣೀಯ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಈ ಪ್ರವಾಸಿಗರು ದಕ್ಷಿಣ ಗೋವಾದ ಕೊಲ್ಲಮ್ ನಿಲ್ದಾಣದಲ್ಲಿ ರೈಲಿನಿಂದ ಇಳಿದ ನಂತರ ದೂಧ್ಸಾಗರ್ ತಲುಪಲು ನೈಋತ್ಯ ರೈಲ್ವೆ ಮಾರ್ಗದ ಹಳಿಗಳ ಉದ್ದಕ್ಕೂ ನಡೆಯುತ್ತಾರೆ.
ಆದರೆ ಗೋವಾ ಪೊಲೀಸ್, ಅರಣ್ಯ ಇಲಾಖೆ ಮತ್ತು ರೈಲ್ವೇಯು ಮಳೆಗಾಲದಲ್ಲಿ ಭಾರೀ ಮಳೆ ಮತ್ತು ಅವಘಡಗಳ ಸಾಧ್ಯತೆಯನ್ನು ಪರಿಗಣಿಸಿ ಟ್ರೆಕ್ಕಿಂಗ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ.