ರಾಜ್ಯಸಭೆ: ಶ್ವೇತಪತ್ರದ ಮೇಲೆ ಚರ್ಚೆ ವೇಳೆ ಪ್ರತಿಪಕ್ಷಗಳಿಂದ ಸಭಾತ್ಯಾಗ
ರಾಮ ಮಂದಿರ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳಲು ಸಿಪಿಎಂ ನಕಾರ
Rajya SabhaCredit: PTI via Sansad TV
ಹೊಸದಿಲ್ಲಿ : ಆರ್ಥಿಕತೆ ಕುರಿತು ಬಿಜೆಪಿ ಸರಕಾರದ ಶ್ವೇತಪತ್ರವನ್ನು ವಿರೋಧಿಸಿ ಪ್ರತಿಪಕ್ಷಗಳು ಶನಿವಾರ ರಾಜ್ಯಸಭೆಯಿಂದ ಹೊರಕ್ಕೆ ನಡೆದರೆ, ಸದನದಲ್ಲಿ ರಾಮ ಮಂದಿರ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳಲು ಸಿಪಿಎಂ ನಿರಾಕರಿಸಿತು.
ಸಂಸತ್ತಿನ ಉಭಯ ಸದನಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮೇಲೆ ಚರ್ಚೆ ನಡೆಸಿದವು.
ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರಾವಧಿಗಳಲ್ಲಿ ಆರ್ಥಿಕತೆ ಸ್ಥಿತಿಯನ್ನು ಹೋಲಿಸಲು ಸರಕಾರವು ಸಂಸತ್ತಿನಲ್ಲಿ ಮಂಡಿಸಿದ್ದ ಶ್ವೇತಪತ್ರವನ್ನು ವಿರೋಧಿಸಿ ಟಿಎಂಸಿ ಮತ್ತು ಡಿಎಂಕೆ ಸೇರಿದಂತೆ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು.
ರಾಜ್ಯಸಭೆಯಲ್ಲಿ ಶ್ವೇತಪತ್ರದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಅವರು,‘ಕೇರಳಕ್ಕೆ ತಾರತಮ್ಯವನ್ನು ಪ್ರತಿಭಟಿಸಿ ನಾವು ಸಭಾತ್ಯಾಗ ಮಾಡುತ್ತಿದ್ದೇವೆ’ ಎಂದು ಹೇಳಿದರು. ನಂತರ ನಡೆಯಲಿದ್ದ ರಾಮ ಮಂದಿರ ಚರ್ಚೆಯ ಕುರಿತು ಅವರು,‘ರಾಜಕೀಯ ಪರಿಸ್ಥಿತಿಗೆ ಕೋಮುಬಣ್ಣ ಹಚ್ಚುವುದನ್ನೂ ನಮ್ಮ ಪಕ್ಷವು ಒಪ್ಪುವುದಿಲ್ಲ ’ ಎಂದರು.
ಇದು ಶ್ವೇತಪತ್ರವಲ್ಲ, ಇದು ಚುನಾವಣಾ ಪತ್ರವಾಗಿದೆ. ಜಾಣ ಮರೆವು ತೋರಿಸಲಾಗಿದೆ ಮತ್ತು ಆಯ್ಕೆ ಮಾಡಿಕೊಂಡ ವಿಷಯಗಳನ್ನು ಮಾತ್ರ ಹೇಳಲಾಗಿದೆ. 2004-09ರ ನಡುವಿನ ಅವಧಿ ಉತ್ತಮವಾಗಿತ್ತು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಅದರ ಹೆಗ್ಗಳಿಕೆಯನ್ನು ಹಿಂದಿನ (ಎನ್ ಡಿ ಎ) ಸರಕಾರಕ್ಕೆ ನೀಡಿದ್ದಾರೆ. ಇದು ಸಾಕಷ್ಟು ವಿಚಿತ್ರವಾಗಿದೆ ಎಂದು ಹೇಳಿದರು.
2004-09ರ ನಡುವಿನ ಮೊದಲ ಅಧಿಕಾರಾವಧಿಯಲ್ಲಿ ಎಡರಂಗವು ಯುಪಿಎ ಸರಕಾರವನ್ನು ಬೆಂಬಲಿಸಿತ್ತು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ 700 ರೈತರು ಮೃತಪಟ್ಟಿದ್ದಾರೆ. ನೋಟು ನಿಷೇಧ ಸಂದರ್ಭದಲ್ಲಿ ಹಳೆಯ ನೋಟುಗಳನ್ನು ವಿನಿಮಯಗೊಳಿಸಲು ಬ್ಯಾಂಕುಗಳ ಎದುರು ಸರದಿ ಸಾಲುಗಳಲ್ಲಿ ನಿಂತಿದ್ದ ನೂರಾರು ಜನರು ಸಾವನ್ನಪ್ಪಿದ್ದರು ಎಂದು ಹೇಳಿದ ಡಿಎಂಕೆ ಸದಸ್ಯ ತಿರುಚ್ಚಿ ಶಿವ ಅವರು, ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಎದುರಿಸಿದ್ದ ಸಂಕಷ್ಟಗಳನ್ನು ಸದನದ ಗಮನಕ್ಕೆ ತಂದರು.
ಚೆನ್ನೈನಲ್ಲಿ ಪ್ರವಾಹದಿಂದ ಜನರಿಗೆ ಪರಿಹಾರವನ್ನು ಒದಗಿಸಲು ಹಣಕಾಸು ನೆರವು ಒದಗಿಸುವಂತೆ ತಮಿಳುನಾಡಿನ ಮನವಿಗೆ ಕೇಂದ್ರವು ಕಿವಿಗೊಟ್ಟಿಲ್ಲ ಎಂದು ಆರೋಪಿಸಿದರು. ತಾನು ಸಭಾತ್ಯಾಗ ಮಾಡುತ್ತಿದ್ದೇನೆ ಎಂದ ಅವರು, ತಾನು ತನ್ನ ವಾಕ್ಯವನ್ನು ಪೂರ್ಣಗೊಳಿಸುವ ಮೊದಲೇ ಮೈಕ್ರೋಫೋನನ್ನು ಆಫ್ ಮಾಡಲಾಗಿತ್ತು ಎಂದರು.
‘ಈ ಶ್ವೇತಪತ್ರವನ್ನು ನಾವು ತಿರಸ್ಕರಿಸುತ್ತೇವೆ. ಅದು ಸಂಸತ್ತಿನ ಸಾಮೂಹಿಕ ಬುದ್ಧಿಮತ್ತೆಯನ್ನು ಅವಮಾನಿಸಿದೆ ಮಾತ್ರವಲ್ಲ, ಭಾರತದ ಜನರನ್ನು ವಂಚಿಸಲು ಮತ್ತು ಮೂರ್ಖರನ್ನಾಗಿಸಲೂ ಪ್ರಯತ್ನಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶ್ವೇತಪತ್ರದಲ್ಲಿಯ ಸುಳ್ಳುಗಳಿಗೆ ಮತ್ತು ಮೋದಿ ಸರಕಾರಕ್ಕೆ ಭಾರತದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂಬ ಭರವಸೆಯೊಂದಿಗೆ ನಾನು ಮತ್ತು ನನ್ನ ಪಕ್ಷ ಸಭಾತ್ಯಾಗ ನಡೆಸುತ್ತಿದ್ದೇವೆ’ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಹೇಳಿದರು.