ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ | ಪಶ್ಚಿಮ ಬಂಗಾಳ ಸರ್ಕಾರಕ್ಕೆ ‘ಸುಪ್ರೀಂ’ ತರಾಟೆ
ವೈದ್ಯೆಯ ವೈಯುಕ್ತಿಕ ಮಾಹಿತಿ ಸಾಮಾಜಿಕ ಜಾಲತಾಣಗಳಿಂದ ತೆಗೆಯಲು ಆದೇಶ
PC : PTI
ಹೊಸದಿಲ್ಲಿ : ಕೋಲ್ಕತ್ತಾದ ಸರ್ಕಾರಿ ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಹತ್ಯೆಗೀಡಾದ ಟ್ರೈನಿ ವೈದ್ಯೆಯ ಹೆಸರು, ಫೋಟೋಗಳು ಮತ್ತು ವೀಡಿಯೊಗಳನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಗುರುತನ್ನು ಬಹಿರಂಗಪಡಿಸುವುದು ನಿಪುನ್ ಸಕ್ಸೇನಾ ಪ್ರಕರಣದಲ್ಲಿ ನೀಡಿದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ದೇಶದಾದ್ಯಂತ ವೈದ್ಯರ ರಕ್ಷಣೆ ಕುರಿತ ವ್ಯವಸ್ಥೆಯ ಲೋಪವನ್ನು ಪ್ರಕರಣ ಎತ್ತಿ ತೋರಿಸಿದೆ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಆಸ್ಪತ್ರೆಗಳಲ್ಲಿ ಯುವ ವೈದ್ಯರನ್ನು 36 ಗಂಟೆಗಳ ಕಾಲ ಕೆಲಸದಲ್ಲಿ ತೊಡಗಿಸಲಾಗುತ್ತಿದೆ. ಕೆಲಸದ ಸ್ಥಳವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರೋಟೊಕಾಲ್ನಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಪೀಠವು ಒತ್ತಿ ಹೇಳಿದೆ.
ಪ್ರಕರಣ ಕುರಿತಂತೆ ಸ್ವಯಂಪ್ರೇರಿತವಾಗಿ ವಿಚಾರಣೆಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನ ಪೀಠವು, ಪ್ರಕರಣವನ್ನು ಭಯಾನಕ ಘಟನೆ ಎಂದು ಹೇಳಿದೆ. ಎಫ್ಐಅರ್ ದಾಖಲಿಸಲು ವಿಳಂಬ ಕುರಿತಂತೆಯೂ ಪಶ್ಚಿಮ ಬಂಗಾಳ ಪೊಲೀಸರನ್ನು ಪೀಠವು ಪ್ರಶ್ನಿಸಿದೆ.
“ಆಸ್ಪತ್ರೆಯ ಆಡಳಿತ ಮಂಡಳಿ ಏನು ಮಾಡುತ್ತಿತ್ತು? ಕೃತ್ಯ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಕಾಲೇಜಿನ ಪ್ರಾಂಶುಪಾಲರು ಪ್ರಯತ್ನಿಸಿದ್ದಾರೆ. ಮೆಡಿಕಲ್ ಕಾಲೇಜು ಪ್ರಾಂಶುಪಾಲರು ವಿಚಾರಣೆ ಎದುರಿಸುತ್ತಿರುವಾಗ ಅವರನ್ನು ಕೂಡಲೇ ಬೇರೆ ಕಾಲೇಜಿಗೆ ನೇಮಕ ಮಾಡಿದ್ದು ಹೇಗೆ?” ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಪ್ರಶ್ನಿಸಿದೆ.
ವಿಚಾರಣೆಯ ವೇಳೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು. ಕೋಲ್ಕತ್ತಾ ಪೊಲೀಸರ ಗಮನಕ್ಕೆ ಬಾರದೆ 7,000 ಮಂದಿಯ ಗುಂಪು ಆಸ್ಪತ್ರೆಗೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂಬ ವಿಚಾರವನ್ನು ಅವರು ಗಮನಕ್ಕೆ ತಂದರು.
ಕೋಲ್ಕತ್ತಾ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೊರ್ಟ್, ಸಾವಿರಾರು ಸಂಖ್ಯೆಯ ಜನರ ಗುಂಪು ಆರ್.ಜಿ. ಕರ್ ಮೆಡಿಕಲ್ ಕಾಲೇಜಿಗೆ ಹೇಗೆ ಪ್ರವೇಶಿಸಿತು ಎಂದು ಪ್ರಶ್ನಿಸಿದೆ.