ವಿಶ್ವದಾದ್ಯಂತ ಕೋವಿಡ್ ಲಸಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಅಸ್ಟ್ರಾಜೆನೆಕಾ
Photo: PTI
ಹೊಸದಿಲ್ಲಿ : COVID-19 ಸಾಂಕ್ರಾಮಿಕ ರೋಗದ ತನ್ನ ಲಸಿಕೆಯನ್ನು ವಿಶ್ವಾದ್ಯಂತ ಹಿಂತೆಗೆಯುವುದಾಗಿ ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪೆನಿ ಅಸ್ಟ್ರಾಜೆನೆಕಾ ಮಂಗಳವಾರ ಹೇಳಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕೋವಿಡ್ ಲಸಿಕೆಗಳಿರುವುದರಿಂದ ತಮ್ಮ ಲಸಿಕೆ ಹಿಂಪಡೆಯುತ್ತಿರುವುದಾಗಿ ಅದು ಹೇಳಿದೆ. ಯುರೋಪಿನಲ್ಲಿ ವ್ಯಾಕ್ಸ್ಝೆವ್ರಿಯಾ ಲಸಿಕೆಯ ಮಾರುಕಟ್ಟೆ ಅನುಮತಿಯನ್ನು ಹಿಂಪಡೆಯುವುದಾಗಿಯೂ ಕಂಪೆನಿ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಕೋವಿಡ್ ನ ವಿವಿಧ ತಳಿಗಳು ಕಂಡು ಬರುತ್ತಿರುವುದರಿಂದ ಅಸ್ಟ್ರಾಜೆನೆಕಾ ಉತ್ಪಾದಿಸುತ್ತಿರುವ ವ್ಯಾಕ್ಸ್ಝೆವ್ರಿಯಾ ಲಸಿಕೆಗೆ ಬೇಡಿಕೆ ಕಡಿಮೆಯಾಗಿ ಕುಸಿತಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇನ್ನು ಮುಂದೆ ಆ ಲಸಿಕೆಯನ್ನು ತಯಾರಿಸುವುದಿಲ್ಲ ಅಥವಾ ಸರಬರಾಜು ಮಾಡುವುದಿಲ್ಲ ಎಂದು ಕಂಪೆನಿ ಹೇಳಿದೆ,
ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಎಣಿಕೆಗಳಂತಹ ಅಡ್ಡ-ಪರಿಣಾಮಗಳನ್ನು ತಮ್ಮ ಲಸಿಕೆ ಉಂಟುಮಾಡುತ್ತದೆ ಎಂದು ಆಂಗ್ಲೋ-ಸ್ವೀಡಿಷ್ ಔಷಧಿ ತಯಾರಕ ಕಂಪೆನಿ ಅಸ್ಟ್ರಾಜೆನೆಕಾ ಲಂಡನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಈ ಹಿಂದೆ ಒಪ್ಪಿಕೊಂಡಿದೆ.
ಲಸಿಕೆಯನ್ನು ಹಿಂಪಡೆಯಲು ಮಾರ್ಚ್ 5 ರಂದು ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಮೇ 7 ರಿಂದ ಅದು ಜಾರಿಗೆ ಬಂದಿತು ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಕೋವಿಡ್ ಲಸಿಕೆಗೆ ಬೇಡಿಕೆ ಕುಸಿಯುತಿದ್ದಂತೆ ಲಂಡನ್ ಮೂಲದ ಅಸ್ಟ್ರಾಜೆನೆಕಾ ಕಳೆದ ವರ್ಷದಿಂದ ಉಸಿರಾಟಕ್ಕೆ ಸಂಬಂಧಿಸಿದ ಸಿನ್ಸಿಟಿಯಲ್ ವೈರಸ್ ಲಸಿಕೆಗಳು ಮತ್ತು ಸ್ಥೂಲಕಾಯತೆಯ ಔಷಧಿಗಳ ಉತ್ಪಾದನೆಯತ್ತ ಹೆಚ್ಚು ಗಮನಹರಿಸಿದೆ ಎಂದು ತಿಳಿದು ಬಂದಿದೆ.